ಮಡಿಕೇರಿ, ಡಿ. ೬: ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸಲು ಶಿಕ್ಷಣ ಇಲಾಖೆಯು ದಿಟ್ಟ ಕ್ರಮ ಕೈಗೊಂಡಿದ್ದು, ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಜೊತೆಗೂಡಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎಂ. ಚಂದ್ರಕಾAತ್ ಹೇಳಿದರು. ಕೊಡಗು ಜಿ.ಪಂ.ಯ ಸಹಯೋಗದೊಂದಿಗೆ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸೋಮವಾರ ನಗರದ ಸಂತ ಮೈಕಲರ ಶಾಲೆಯಲ್ಲಿ ಕೊಡಗು ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಉತ್ತಮಪಡಿಸುವ ಕುರಿತು ಏರ್ಪಡಿಸಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಕುರಿತು ಆತ್ಮವಿಶ್ವಾಸ ಹಾಗೂ ಕಲಿಕಾ ಪ್ರೇರೇಪಣೆ ಮೂಡಿಸಬೇಕು ಎಂದರು. ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಪಡೆಯಲು ಹೆಜ್ಜೆ ಹಾಕುವ ಮೊದಲ ಪ್ರಮುಖ ಘಟ್ಟವಾಗಿದ್ದು, ಇಲ್ಲಿನ ಸಾಧನೆ ಜೀವನದ ಎಲ್ಲ ಹಂತಗಳಲ್ಲೂ ಪ್ರಭಾವ ಬೀರುತ್ತದೆ ಎಂದರು.
ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆ ೯ನೇ ಸ್ಥಾನ ಗಳಿಸಿದ್ದು, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಫಲಿತಾಂಶ ರಾಜ್ಯ ಮಟ್ಟದಲ್ಲಿ ೫ನೇ ಸ್ಥಾನದೊಳಗೆ ಫಲಿತಾಂಶದೊಳಗಿರಲು ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಹೆಚ್ಚಿನ ಶ್ರಮ ವಹಿಸಬೇಕು ಎಂದರು. ಶೈಕ್ಷಣಿಕ ಗುಣಮಟ್ಟ ಪ್ರಗತಿ ಸಾಧಿಸಲು ಮಕ್ಕಳಿಗೆ ವಿಶೇಷ-ವಿನೂತನ ಕಾರ್ಯಕ್ರಮ ನೀಡುವ ಉದ್ದೇಶದಿಂದ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಸುಧಾರಣೆ ಮಾಡಬೇಕು ಎಂಬ ಉದ್ದೇಶದಿಂದ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಹೊಸ ವಿಧಾನಗಳ ಕುರಿತು ಮಾಹಿತಿ ನೀಡಿದ ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಎಂ. ಮಹದೇವಸ್ವಾಮಿ, ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಮಕ್ಕಳ ಪರೀಕ್ಷಾ ಫಲಿತಾಂಶ ಉತ್ತಮಪಡಿಸುವ ಕುರಿತು ಪೋಷಕರೊಂದಿಗೆ ಸಮಾಲೋಚನೆ ನಡೆಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸಲು ಕ್ರಮ ವಹಿಸಬೇಕು ಎಂದು ವಿವರಿಸಿದರು.
ಡಯಟ್ನ ಹಿರಿಯ ಉಪನ್ಯಾಸಕಿ ಗೀತಾ, ಉಪನ್ಯಾಸಕರಾದ ಶಿವಕುಮಾರ್, ಎಸ್.ಪಿ. ಮಹಾದೇವ ಅವರು ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸಲು ಶಾಲೆಯ ವತಿಯಿಂದ ಕೈಗೊಳ್ಳಬೇಕಾದ ಶೈಕ್ಷಣಿಕ ಕ್ರಮಗಳ ಕುರಿತು ವಿವರಿಸಿದರು. ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಮಾತನಾಡಿ, ಶಾಲೆಗಳಲ್ಲಿ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಜವಾಬ್ದಾರಿ ಹಾಗೂ ಸಮನ್ವಯತೆಯಿಂದ ಕೆಲಸ ನಿರ್ವಹಿಸಿದರೆ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಎಸ್.ಎಸ್.ಎಲ್.ಸಿ. ಫಲಿತಾಂಶ ಉತ್ತಮಪಡಿಸಲು ಸಾಧ್ಯ ಎಂದರು. ಶಿಕ್ಷಣ ಇಲಾಖೆಯ ಉಪ ಯೋಜನಾ ಸಮನ್ವಯಾಧಿಕಾರಿಗಳಾದ ಎಂ. ಕೃಷ್ಣಪ್ಪ, ಸೌಮ್ಯ ಪೊನ್ನಪ್ಪ, ವೀರಾಜಪೇಟೆ ಬಿಇಓ ಎಂ. ಪ್ರಕಾಶ್, ಸೋಮವಾರಪೇಟೆ ಪ್ರಬಾರ ಬಿಇಓ ಎಂ.ವಿ. ಮಂಜೇಶ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ ಕೆ.ಪಿ. ಗುರುರಾಜ್, ಜಿ.ಎಂ. ಹೇಮಂತ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ. ಸದಾಶಿವಯ್ಯ ಎಸ್. ಪಲ್ಲೇದ್, ವಿಷಯ ಪರಿವೀಕ್ಷಕಿ ಕೆ.ಆರ್. ಬಿಂದು, ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು ಪಾಲ್ಗೊಂಡಿದ್ದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜುಳಾ ಚಿತ್ತಾಪುರ ಕಾರ್ಯಕ್ರಮ ನಿರ್ವಹಿಸಿದರು.