*ಗೋಣಿಕೊಪ್ಪ, ಡಿ. ೬: ಮನಸು ಶಾಂತಿಯುತವಾಗಿರಲು ಕವಿತೆಗಳ ಓದಿನಿಂದ ಸಾಧ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಪ್ರಕಾಶ್ ಅಭಿಪ್ರಾಯಪಟ್ಟರು. ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು, ಸಾಹಿತ್ಯ ಸಂವರ್ಧಕ ಪರಿಷತ್ತು, ಛಂದೋಬದ್ಧಕಾವ್ಯ ಸಂವರ್ಧಕ ಪರಿಷತ್ತು, ಬೊಮ್ಮಲಿಂಗೇಶ್ವರ ಪ್ರಕಾಶನ, ಕಲಾ ಉತ್ಸವ ಕೊಡಗು ಸಹಯೋಗದಲ್ಲಿ ವೀರಾಜಪೇಟೆ ನಗರದ ಮೊಗರಗಲ್ಲಿಯಲ್ಲಿ ನಡೆದ ಕವಿಗೋಷ್ಠಿ ಮತ್ತು ಜಾನಪದ ಗೀತೆ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕದನವನ್ನು ತಡೆಯುವ ಶಕ್ತಿ ಮತ್ತು ಸಂತಾನವನ್ನು ನಡೆಸುವ ಯುಕ್ತಿ ಕಾವ್ಯದೊಳಡಗಿದೆ. ಪ್ರತಿಯೊಬ್ಬರ ಮನಸಿನಲ್ಲೂ ಕಾವ್ಯ ನೆಲೆನಿಂತಾಗ ಈ ಸಮಾಜದ ಸಂಘರ್ಷಗಳಿAದ ಹೊರಗುಳಿದು ಉತ್ತಮ ಮಾನವೀಯ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. ನೊಂದವರ, ಬೆಂದವರ ಹೃದಯಗಳನ್ನು ಅರಿತುಕೊಂಡಾಗ ಕವಿ ಹೃದಯಗಳು ಕಾವ್ಯ ರಚಿಸಬೇಕು. ವಾಚಾಳಿತನವನ್ನು ಬಿಟ್ಟು ಮೌನತೆಯನ್ನು ಅಪ್ಪಿಕೊಂಡಾಗ ಕವಿತೆಗಳು ಅರಳುತ್ತವೆ ಎಂದರು. ನಿವೃತ್ತ ಪ್ರಾಂಶುಪಾಲ, ನಾಟಕ ಭಾರ್ಗವ ಕೆಂಪರಾಜು ಮಾತನಾಡಿ, ಮನುಷ್ಯ ಜೀವನದ ಪಾರಂಪರಿಕ ಹಿನ್ನೆಲೆಯಲ್ಲಿ ಕಾವ್ಯವನ್ನ ಅಪ್ಪಿಕೊಂಡಾಗಿದೆ. ಕವಿ ಅಳಿದು ಹೋಗಬಹುದು ಆದರೆ ಉತ್ತಮ ಕಾವ್ಯ ಅಳಿದು ಹೋಗಲು ಸಾಧ್ಯವಾಗುವುದಿಲ್ಲ. ಹೀಗಾಗಿ, ರಾಮಾಯಣ, ಮಹಾಭಾರತ ಮಹಾಕಾವ್ಯ ಇಂದಿಗೂ ಸಮಾಜದಲ್ಲಿ ಉಸಿರಾಡುತ್ತಿದೆ. ರಾಜ, ಮಹಾರಾಜರ ಆಸ್ಥಾನದಲ್ಲೂ ಕವಿಗಳಿಗೆ ಗೌರವವನ್ನು ನೀಡಲಾಗುತ್ತಿತ್ತು.
ಇಂದಿಗೂ ಹಲವು ಸಂಘಟನೆಗಳು ಕಾವ್ಯಗೋಷ್ಠಿಗಳನ್ನು ನಡೆಸುವ ಮೂಲಕ ಕವಿಗಳಿಗೆ ಗೌರವ ಸಲ್ಲಿಸುತ್ತಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ. ಇಂದು ಬಹಳಷ್ಟು ಜನ ನಮಗೆ ಒಲ್ಲದ ಪ್ರಶಸ್ತಿಗಳ ಹಿಂದೆ ಬಿದ್ದು ಬೀಗುತ್ತಿರುವುದು ಕಾವ್ಯ ಲೋಕದೊಳಗೆ ವಿಹರಿಸುವ ಕವಿ ಹೃದಯಗಳಿಗೆ ಶೋಭಿಸುವ ವ್ಯಕ್ತಿತ್ವವಲ್ಲ ಹಣಕ್ಕಾಗಿ ನೀಡುವ ಪ್ರಶಸ್ತಿಗಳ ಹಿಂದೆ ಹೋಗದಂತೆ ಸಲಹೆ ನೀಡಿದರು.
ಕವಿ, ಪತ್ರಕರ್ತ ಜಗದೀಶ್ ಜೋಡುಬೀಟಿ ಮಾತನಾಡಿ, ಹೆಚ್ಚು ಪುಸ್ತಕ ಗಳನ್ನು ಓದಿಕೊಂಡಾಗ ಕವಿತೆಗಳನ್ನು ವಿಶಿಷ್ಟ ವಿಭಿನ್ನತೆಯಲ್ಲಿ ಬರೆಯಬಹು ದಾಗಿದೆ. ಮತ್ತೊಬ್ಬರ ಕಾವ್ಯಗಳನ್ನು ಆಸ್ವಾದಿಸದೆ ಉತ್ತಮ ಕಾವ್ಯ ರಚಿಸಲು ಸಾಧ್ಯವಾಗುವುದಿಲ್ಲ. ಸಮಾಜದಲ್ಲಿ ನಡೆಯುವ ಘಟನೆಗಳಿಗೆ ಮನಸ್ಸು ಸ್ಪಂದಿಸುತ್ತ ಆ ಹಿನ್ನೆಲೆಯಲ್ಲಿ ಕಾವ್ಯವನ್ನು ರಚಿಸಬೇಕಾಗಿದೆ. ಸಮಾಜದ ಸುಖ ಮತ್ತು ಸಂಕಷ್ಟಗಳಿಗೆ ಮಿಡಿಯುವ ಹೃದಯವಂತವರಾಗಿರಬೇಕು ಎಂದು ಹೇಳಿದರು.
ಲೇಖಕಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ಮನೆ ಮನೆ ಕಾವ್ಯಗೋಷ್ಠಿ ಪರಿಷತ್ ಸಂಚಾಲಕ, ಪಿ.ಎಸ್. ವೈಲೇಶ ಕೊಡಗು ಅವರು ಕವಿಗೋಷ್ಠಿ ಮತ್ತು ಕವಿ ಜಗದೀಶ್ ಜೋಡುಬೀಟಿ ಅವರ ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ ಸಂಕಲನದ ಕವಿತೆಗಳ ಪರಿಚಯ, ಕವಿಯೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಲೇಖಕ ಗಿರೀಶ್ ಕಿಗ್ಗಾಲು, ಕವಿಯತ್ರಿ ಭಾಗ್ಯವತಿ ಅಣ್ಣಪ್ಪ ಗಾಯಕಿ ಟಿ.ವಿ, ಸುಪ್ರೀತ ದಿಲೀಪ್, ಚಿತ್ರ ಕಲಾವಿದ ಸಾಧಿಕ್ ಹಂಸ ಇದ್ದರು. ಮೂವತೈದಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು.