ವೀರಾಜಪೇಟೆ, ಡಿ. ೬: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವೀರಾಜಪೇಟೆ, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಕಾನೂರು ವಲಯದ ಕುಟ್ಟ ಪಂಚಾಯಿತಿ ಸಭಾಂಗಣದಲ್ಲಿ ಭದ್ರ ಮತ್ತು ಜ್ಞಾನಜ್ಯೋತಿ ಕೇಂದ್ರಗಳ ಸದಸ್ಯರುಗಳಿಗೆ ಸ್ವ-ಉದ್ಯೋಗ ಕಾರ್ಯಾಗಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಆತ್ಮಯೋಜನೆ ರಾಜ್ಯಮಟ್ಟದ ಸದಸ್ಯೆ ರೋಹಿಣಿ ಸುಬ್ಬಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸ್ವ-ಉದ್ಯೋಗ ತರಬೇತಿಗಳನ್ನು ನಿರಂತರವಾಗಿ ಹಮ್ಮಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಮಹಿಳೆಯರ ಪಾಲಿನ ಆಶಾಕಿರಣವಾಗಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರು.

ಡಾ. ಡಿ. ವೀರೇಂದ್ರ ಹೆಗಡೆ ಅವರು ರುಡ್‌ಸೆಟ್ ಸಂಸ್ಥೆಯ ಮೂಲಕ ಸ್ವ-ಉದ್ಯೋಗ ಕ್ರಾಂತಿಯನ್ನೇ ಮಾಡಿದ್ದಾರೆ. ಅಣಬೆ ಬೇಸಾಯ ಕ್ರಮಗಳು, ಜೇನು ಸಾಕಾಣಿಕೆ, ಹೈನುಗಾರಿಕೆ, ಅಲಂಕಾರಿಕ ವಸ್ತುಗಳ ತಯಾರಿ ವಿಧಾನಗಳು, ಆಹಾರ ಪದ್ಧತಿಗೆ ಸಹಕಾರಿ, ಮಾರುಕಟ್ಟೆ ವ್ಯವಸ್ಥೆ ಎಂಬೆಲ್ಲ ವಿಚಾರಗಳ ಬಗ್ಗೆ ಸವಿಸ್ತಾರವಾದ ಮಾಹಿತಿಗಳನ್ನು ಪ್ರಾತ್ಯಕ್ಷಿಕೆ ಮುಖೇನವಾಗಿ ನೀಡಿದರು.

ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೇಯಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾನೂರು ವಲಯದ ಮೇಲ್ವಿಚಾರಕ ನಿತಿನ್ ಇದ್ದರು. ಪೂಜೆಕಲ್ಲು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಹೇಮಾವತಿ ಸ್ವಾಗತಿಸಿ, ಕುಟ್ಟ ಕಾರ್ಯಕ್ಷೇತ್ರದ ಸ್ವಪ್ನ ನಿರೂಪಿಸಿದರು.