ವೀರಾಜಪೇಟೆ, ಡಿ. ೬: ಕಲೆಯನ್ನು ಪ್ರೀತಿಸುವ, ಆಸ್ವಾದಿಸುವ ಮನಸ್ಸುಗಳು ಜಗತ್ತಿನಲ್ಲಿ ಇಲ್ಲದಿರಲು ಅಸಾಧ್ಯ ಎಂದು ವೀರಾಜಪೇಟೆ ತಾಲೂಕು ದಂಡಾಧಿಕಾರಿಗಳು ಮತ್ತು ತಹಶೀಲ್ದಾರ್ ಹೆಚ್.ಎನ್.ರಾಮಚಂದ್ರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಧೀಕ್ ಆರ್ಟ್ಸ್ ಲಿಂಕ್ ವೀರಾಜಪೇಟೆ ಮತ್ತು ಕೇರಳ ಚಿತ್ರಕಲಾ ಪರಿಷತ್ ಕಣ್ಣೂರು ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ವೀರಾಜಪೇಟೆ ತಾಲೂಕು ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಳ ಎಡಮಕ್ಕಿ ಗ್ರಾಮದ Sಟ್ಸಗಿ ಹೋಂಸ್ಟೇಯಲ್ಲಿ ಕಲಾ ಉತ್ಸವ ಕೊಡಗು ಅಂಗವಾಗಿ ಆಯೋಜಿಸಲಾಗಿದ್ದ ಅಂತರ್ ರಾಜ್ಯ ಚಿತ್ರಕಲೆಗಾರರ ಚಿತ್ರಕಲಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಲೆಗೆ ವಯಸ್ಸು, ಹೆಣ್ಣು ಪುರುಷ, ಯುವಕ - ಯುವತಿ ಎಂಬುದು ಗಣನೆಗೆ ಬರುವುದಿಲ್ಲ. ಕಲೆಯನ್ನು ಆಸ್ಪಾದಿಸುವ ಪ್ರತಿಯೊಬ್ಬರು ಚಿತ್ರವನ್ನು ಬರೆದ ಕಲೆಗಾರರನ್ನು ಗೌರವಿಸುವಂತಾಗಬೇಕು, ಚಿತ್ರ ಕಲೆಯು ನಿಂತ ನೀರಾಗಬಾರದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ವೀರಾಜಪೇಟೆ ಪುರಸಭೆಯ ಸದಸ್ಯರಾದ ಮೊಹಮ್ಮದ್ ರಾಫಿ ಅವರು, ಸ್ಥಳೀಯ ಚಿತ್ರಕಲಾವಿದರಾದ ಸಾಧೀಕ್ ಹಂಸ ಅವರು ಸತತ ಏಳು ವರ್ಷಗಳಿಂದ ಕಲಾ ಉತ್ಸವ ಕೊಡಗು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ಕಾಲಘಟ್ಟವು ಕಂಪ್ಯೂಟರ್ ಯುಗವಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಬಿಂಬಿಸುವ ಚಿತ್ರಗಳು ಎಲ್ಲಾ ಸ್ಥರಗಳಲ್ಲಿಯು ರಾರಾಜಿಸುತ್ತಿವೆ. ಕಲರ್ ಪ್ರಿಂಟ್, ಫ್ಲೆಕ್ಸ್ ಮುಂತಾದವುಗಳು ಇಂದು ನೈಜ ಚಿತ್ರಕಲೆಗಾರರನ್ನು ಅಂಚಿಗೆ ದೂಡಿದೆ. ಪಾರಂಪರಿಕವಾಗಿ ಅರಳಿದ ನೈಜ ಕಲೆಯು ಶಾಶ್ವತವಾದುದು. ಎಂದಿಗೂ ಬೆಲೆ ಕಟ್ಟಲಾಗದ ಅಮೂಲ್ಯವಾದ ವಸ್ತು. ಅದೇ ರೀತಿ ಚಿತ್ರಕಲೆಯ ಕಲೆಗಾರನೂ ಸರ್ವ ಗೌರವಕ್ಕೆ ಅಧಿಪತಿಯಾಗುತ್ತಾನೆ. ಸರ್ಕಾರಗಳು ಮತ್ತು ಸಾಮಾಜಿಕ ಹಿತಚಿಂತಕರು ಚಿತ್ರಕಲೆಗಾರರನ್ನು ಪ್ರೋತ್ಸಾಹಿಸುವಂತಾಗಬೇಕು. ಈ ನಿಟ್ಟನಲ್ಲಿ ಶಿಬಿರವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕೇರಳ ಚಿತ್ರಕಲಾ ಪರಿಷತ್ನ ಕಣ್ಣೂರು ಜಿಲ್ಲಾ ಘಟಕದ ಅಧ್ಯಕ್ಷ ಕರ್ನಲ್ ಸುರೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೇರಳ ರಾಜ್ಯ ಲಲಿತ ಕಲಾ ಅಕಾಡೆಮಿ ಸ್ಥಾಪನೆಯಾಗುವ ಮೊದಲೇ ಚಿತ್ರ ಕಲಾ ಪರಿಷತ್ ೧೯೫೭ರಲ್ಲಿ ಸ್ಥಾಪನೆಯಾಗಿದೆ. ಸುಮಾರು ೪೦೦೦ ಕ್ಕಿಂತ ಅಧಿಕ ಚಿತ್ರಕಲೆಗಾರರು ಸದಸ್ಯರಾಗಿರುತ್ತಾರೆ. ಕೊಡಗು ಮತ್ತು ಹತ್ತಿರದ ಕೇರಳ ರಾಜ್ಯಕ್ಕೆ ಅವಿನಾಭವ ಸಂಬAಧವಿದೆ. ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯು ಪ್ರಕೃತಿದತ್ತವಾಗಿದ್ದು, ಚಿತ್ರಕಲೆಗಾರರಿಗೆ ಪೂರಕವಾದ ವಾತವರಣವಿದೆ ಎಂದರು.
ಚಿತ್ರಕಲಾ ಶಿಬಿರದ ಸಂಚಾಲಕರು ಮತ್ತು ಸಾಧಿಕ್ ಆರ್ಟ್ಸ್ ಲಿಂಕ್ ವೀರಾಜಪೇಟೆ ಮಾಲೀಕರಾದ ಸಾಧೀಕ್ ಹಂಸ ಅವರು ಮಾತನಾಡಿ ಕೊಡಗು ಕಲಾ ಉತ್ಸವ ಅಂಗವಾಗಿ ಸತತವಾಗಿ ಏಳು ವರ್ಷಗಳಿಂದ ವಿವಿಧ ಬಗೆಯ ಚಿತ್ರಕಲಾ ಶಿಬಿರಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಚಿತ್ರಕಲೆಗೆ ಮಾತ್ರ ಸೀಮಿತವಾಗದೆ ಕಲೆ, ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಅಧ್ಯಯನ, ವಿಚಾರಗೋಷ್ಠಿ, ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಚಿತ್ರಕಲೆ ಪಂಡಿತರೊAದಿಗೆ ಕಲೆಯ ಬಗ್ಗೆ ವಿಚಾರ ಮಂಥನಗಳನ್ನು ನಡೆಸಲಾಗುತ್ತಿದೆ. ಕಲಾ ಉತ್ಸವದ ಭಾಗವಾಗಿ ಪ್ರಥಮ ಬಾರಿಗೆ ಉಭಯ ರಾಜ್ಯಗಳ ಚಿತ್ರಕಲೆ ಕಲಾವಿದರಿಗೆ ಚಿತ್ರಕಲೆಯ ಮೂಲಕ ಸಂಸ್ಕೃತಿ ವಿನಿಮಯ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದ ಮೊದಲಿಗೆ ಶಿಬಿರದಲ್ಲಿ ಹಾಜರಿದ್ದ ಸರ್ವ ಚಿತ್ರಕಲಾವಿದರಿಗೆ ಕ್ಯಾನ್ವಸ್ ನೀಡಿ ಕಾರ್ಯಕ್ರಮ ಶಿಬಿರವನ್ನು ಉದ್ಘಾಟನೆ ಮಾಡಲಾಯಿತು. ಚಿತ್ರಕಲಾ ಶಿಬಿರದಲ್ಲಿ ೩೦ ಮಂದಿ ಚಿತ್ರಕಲಾವಿದರು ಭಾಗಿಗಳಾದರು. ಸಮಾರೋಪ ಸಮಾರಂಭದಲ್ಲಿ ಕಲಾವಿದರಿಂದ ಮೂಡಿ ಬಂದ ಚಿತ್ರಗಳು ಪ್ರದರ್ಶನಗೊಂಡವು.