ವೀರಾಜಪೇಟೆ, ಡಿ. ೬: ಸಾರ್ವಜನಿಕರಿಗೆ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸಲು ವೀರಾಜಪೇಟೆ ಪುರಸಭೆ ವತಿಯಿಂದ ಜಾಥಾವನ್ನು ಹಮ್ಮಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್ ಮಾತನಾಡಿ, ಪಟ್ಟಣದ ನಾಗರಿಕರು ಕಡ್ಡಾಯವಾಗಿ ಮನೆಯಲ್ಲಿ ಶೌಚಾಲಯ ಹೊಂದಿರಬೇಕು.
ಸಾರ್ವಜನಿಕ ಸ್ಥಳಗಳಲ್ಲಿರುವ ಸಮುದಾಯ ಶೌಚಾಲಯಗಳನ್ನು ಬಳಸುವುದರಿಂದ ಆರೋಗ್ಯ ಹಾಗೂ ಪರಿಸರವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಬಯಲು ಶೌಚಾಲಯಗಳಿಂದ ಅನೇಕ ರೋಗ ರುಜಿನಗಳು ಹರಡುತ್ತವೆ. ಇದರಿಂದ ಮಕ್ಕಳು ಸೇರಿದಂತೆ ಎಲ್ಲಾರು ಅನಾರೋಗ್ಯದಿಂದ ಬಳಲುವಂತಾಗುತ್ತದೆ. ಶಾಲೆ, ಸರ್ಕಾರಿ ಕಚೇರಿ, ಮನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಶೌಚಾಲಯ ಕಟ್ಟಿಸಿಕೊಳ್ಳುವುದರ ಜೊತೆಗೆ ಸ್ವಚ್ಛವಾಗಿ ಬಳಕೆ ಮಾಡಬೇಕು ಎಂದು ಹೇಳಿದರು. ಜಾಥಾದಲ್ಲಿ ವ್ಯವಸ್ಥಾಪಕಿ ಸುಜಾತ, ಆರೋಗ್ಯಾಧಿಕಾರಿ ಕೋಮಲಾ, ಸಿಆರ್ಪಿ ಕವಿತಾ ಸೇರಿದಂತೆ ಶಾಲಾ ಮಕ್ಕಳು, ಪುರಸಭೆ ನೌಕರರು, ನಗರ ಸ್ವಚ್ಛತಾ ಕಾರ್ಮಿಕರು, ಸಾರ್ವಜನಿಕರು ಭಾಗವಹಿಸಿದ್ದರು.