ಮಡಿಕೇರಿ, ಡಿ. ೬: ಶಾಲೆಗೆ ತೆರಳುವ ಕಾಲುಹಾದಿಯಲ್ಲಿ ಕಾಡು ಗಿಡಗಳು ಬೆಳೆದು ವಿದ್ಯಾರ್ಥಿಗಳಿಗೆ ನಡೆಯಲು ಕಷ್ಟಸಾಧ್ಯವಾದ ದುಸ್ಥಿತಿಯಲ್ಲಿತ್ತು. ಅಂಥ ಕಾಲುಹಾದಿಯನ್ನು ಶಾಲಾ ಆಡಳಿತ ಮಂಡಳಿಯೇ ಉತ್ತಮವಾಗಿ ರೂಪಿಸುವ ಮೂಲಕ ಮಾದರಿಯಾಗಿದೆ.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಕೊಡಗು ವಿದ್ಯಾಲಯಕ್ಕೆ ತೆರಳುವ ಅರ್ಧ ಕಿ.ಮೀ. ಅಂತರದ ಕಾಲು ಹಾದಿಯಲ್ಲಿ ಕಾಡು ಗಿಡಗಳು ಬೆಳೆದು ಸಲೀಸಾಗಿ ನಡೆಯಲು ಕಷ್ಟಸಾಧ್ಯವಾಗಿತ್ತು. ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಕಾಲುಹಾದಿಯಲ್ಲಿ ನಡೆಯಲಾಗದೇ ರಸ್ತೆಯಲ್ಲಿಯೇ ಹೆಜ್ಜೆ ಹಾಕುತ್ತಿದ್ದರು. ಈ ರಸ್ತೆಯಲ್ಲಿ ಹೆಚ್ಚಿನ ವಾಹನಗಳೂ ಸಾಗುವುದರಿಂದಾಗಿ ವಿದ್ಯಾರ್ಥಿಗಳು ಇಂತಹ ವಾಹನಗಳಿಂದ ತಪ್ಪಿಸಿಕೊಂಡು ಪರದಾಡುತ್ತಾ ಶಾಲೆಗೆ ತೆರಳಬೇಕಾಗುತ್ತಿತ್ತು. ಅನೇಕ ತಿಂಗಳು ಇದೇ ಸಮಸ್ಯೆ ಮುಂದುವರೆದ ಹಿನ್ನೆಲೆಯಲ್ಲಿ ಕೊಡಗು ವಿದ್ಯಾಲಯ ಶಾಲಾ ಆಡಳಿತ ಮಂಡಳಿಯು ಸ್ವತಃ ಕಾಲುರಸ್ತೆಯಲ್ಲಿ ಬೆಳೆದಿದ್ದ ಕಾಡುಗಿಡಗಳನ್ನು ತೆರವುಗೊಳಿಸಲು ಮುಂದಾಯಿತು.

ಮಡಿಕೇರಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಸಿ. ಸತೀಶ್ ಮತ್ತು ಸ್ಥಳೀಯ ಸದಸ್ಯೆ ಶಾರದಾ ನಾಗಾರಾಜ್ ಸಹಕಾರದಲ್ಲಿ ದಾನಿ ಗಳೋರ್ವರ ಸಹಕಾರದಿಂದ ಕಾಡುಗಿಡಗಳನ್ನು ತೆರವುಗೊಳಿಸಲಾಯಿತು. ಕಾಲು ರಸ್ತೆಯಲ್ಲಿನ ಕಾಡುಗಿಡಗಳನ್ನು ತೆರವುಗೊಳಿಸಲು ಹೆಸರು ಹೇಳಲಿಚ್ಚಿಸದ ದಾನಿಯೋರ್ವರು ಸಹಕಾರ ನೀಡಿದ್ದಾರೆ ಎಂದು ಶಾಲಾಡಳಿತ ಮಂಡಳಿ ನಿರ್ದೇಶಕ ಗುರುದತ್ ಮಾಹಿತಿ ನೀಡಿದರು.