ಏಳೋ ರಾಜ.. ಏಳೋ... ನಾನ್ ಕಣಪ್ಪ ನಿನ್ ವಿನು ಬಂದಿದ್ದೀನಿ. ಇನ್ ಮುಂದೆ ಎಲ್ಲೂ ನಿನ್ ಬಿಟ್ಟು ಹೋಗೋಲ್ಲ ಕಣೋ ರಾಜಾ.. ಬಾರೋ.. ಬಾ.. ಮೈಸೂರಿಗೆ ಹೋಗ್ ಬಿಡೋಣ.. ನನ್ನೊಂದಿಗೆ ಬಂದ್ ಬಿಡು ನನ್ನಪ್ಪಾ.. ಅರ್ಜುನಾ ಎದ್ದು ಬಾರೋ..
ಹೀಗೆಂದು ಕೊಡಗು ಗಡಿ ಗ್ರಾಮ ವಾದ ಎಸಳೂರು ಬಳಿಯ ದಬ್ಬಳ್ಳಿ ಕಟ್ಟೆ ಕಾಡಿನಲ್ಲಿ ಆನೆ ಮಾವುತ ವಿನು ಗೋಗರೆದು ಕಣ್ಣೀರು ಹಾಕುತ್ತಿದ್ದರೆ.. ಇವನ ೨೨ ವರ್ಷಗಳ ಗೆಳೆಯ ಅರ್ಜುನ ಮತ್ತೆಂದು ಏಳಲಾಗದ ಸ್ಥಿತಿ ಯಲ್ಲಿ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದ.. ವಿನುವಿನ ಆರ್ತನಾದ ಆ ಕಾಡಿನಲ್ಲಿ ಮಾರ್ದನಿಸುತ್ತಿತ್ತು. ಅರ್ಜುನನ ಕೊನೇ ಪಯಣಕ್ಕೆ ಸಾಕ್ಷಿಯಾಗಲು ಬಂದವರ ಕಣ್ಣುಗಳು ಅತ್ತು ಅತ್ತೂ ಕೆಂಪಾಗಿದ್ದವು.
ಮೈಸೂರು ದಸರಾದ ಪಟ್ಟದಾ ನೆಯಾಗಿ ೮ ವರ್ಷಗಳ ಕಾಲ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ತನ್ನ ೬೪ನೇ ವಯಸ್ಸಿನಲ್ಲಿ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ ಮರುದಿವನೇ ಅರ್ಜುನನ ಸಾವಿನ ಬಗ್ಗೆ ಅನೇಕ ಸಂಶಯಗಳು ಹುಟ್ಟಿ ಕೊಂಡಿವೆ. ಕಾಡಾನೆ ಸೆರೆ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದ ಕೆಲವು ಕಾವಾಡಿಗಳು ಹೇಳುವಂತೆ, ಕಾರ್ಯಾಚರಣೆ ಸಂದರ್ಭ ಅರಣ್ಯ ಇಲಾಖೆಯ ವೈದ್ಯಾ ಧಿಕಾರಿ ಹಾರಿಸಿದ ಅರ ವಳಿಕೆಯ ಮದ್ದಿನ ಗುಂಡು ಆಕಸ್ಮಿಕವಾಗಿ ಅರ್ಜುನನ ಕಾಲಿಗೆ ತಗು ಲಿತ್ತು. ಪರಿಣಾಮ ತೀವ್ರ ಗಾಯ ಗೊಂಡ ಅರ್ಜುನ ತನ್ನ ಎದು ರಾಳಿಯಾಗಿ ಕಾದಾಡಲು ಮುಂದಾದ ಕಾಡಾನೆ ಜೊತೆ ಗುದ್ದಾಟ ಮಾಡ ಲಾಗದೇ ಕಾಡಾನೆಯ ತಿವಿತಕ್ಕೆ ಸುಲಭದಲ್ಲಿ ಸಿಕ್ಕಿ ಹೊಟ್ಟೆ, ಪಕ್ಕೆಯ ಭಾಗಕ್ಕೆ ಪೆಟ್ಟಾಗಿ ರಕ್ತಸ್ರಾವದಿಂದಾಗಿ ಅರ್ಜುನ ಸಾವನ್ನಪ್ಪಿದ. ಕಾಲಿಗೆ ಗುಂಡು ತಾಗದೇ ಇದ್ದಿದ್ದರೆ ಅರ್ಜುನ ಸಾಯುತ್ತಿರಲಿಲ್ಲ.
ಸ್ಥಳದಲ್ಲಿದ್ದ ಅರಣ್ಯಾಧಿಕಾರಿಗಳು ಹೇಳುವಂತೆ, ಕಾರ್ಯಾಚರಣೆ ಸಂದರ್ಭ ಅರ್ಜುನನ ಜೊತೆಯೇ ಹೆಜ್ಜೆಹಾಕಿದ್ದ ಪ್ರಶಾಂತ್ ಎಂಬ ಸಾಕಾನೆಗೆ ವೈದ್ಯರು ಸಿಡಿಸಿದ ಅರ ವಳಿಕೆ ಮದ್ದಿನ ಗುಂಡು ಆಕಸ್ಮಿಕವಾಗಿ ತಗುಲಿತ್ತು. ಹೀಗಾಗಿ ಪ್ರಶಾಂತ್ ಸ್ಥಳದ ಲ್ಲಿಯೇ ಪ್ರಜ್ಞಾಹೀನನಾದ. ಈ ಘಟನೆಯಿಂದ ಕೂಡಲೇ ಕಾರ್ಯಾ ಚರಣೆಯಲ್ಲಿ ತೊಡಗಿದ್ದ ಮಾವುತ, ಕಾವಾಡಿಗರು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೂಡಲೇ ಪ್ರಶಾಂತ್ ನನ್ನು ಎಚ್ಚರಿಸುವ ಕಾರ್ಯಕ್ಕೆ ಮುಂದಾದರು. ತಡಮಾಡಿದರೇ ಪ್ರಶಾಂತ್ ಜೀವಕ್ಕೇ ಆಪತ್ತು ಎಂಬ ಹಿನ್ನೆಲೆಯಲ್ಲಿ ಎಲ್ಲರ ಲಕ್ಷö್ಯ ಪ್ರಶಾಂತ್ ನತ್ತ ಇತ್ತು. ಇದೇ ಸಂದರ್ಭ ಮಾವುತ ನಿಲ್ಲದೇ ಒಬ್ಬಂಟಿಯಾಗಿದ್ದ ಅರ್ಜುನ ತನ್ನ ಎದುರಿಗೆ ಬಂದ ಕಾಡಾನೆ ಜೊತೆ ಕಾದಾಟಕ್ಕೆ ಇಳಿದಿದ್ದಾನೆ. ಈ ಕಾದಾಟದಲ್ಲಿ ತೀವ್ರ ಗಾಯಗೊಂಡು ಅರ್ಜುನ ಸಾವನ್ನಪ್ಪಿದ್ದಾನೆ.
ಹೀಗೇ ಅರ್ಜುನನ ಸಾವಿನ ಸುತ್ತ ಸಂಶಯದ ಬೆಟ್ಟ ಗಳೇ ದೊಡ್ಡದಾಗಿರುವಂತೆ ನಿಖರ ಕಾರಣ ಹೇಳಬೇಕಾದ ಅರ್ಜುನ ಮಾತ್ರ ತನ್ನನ್ನು ಪೊರೆದ ಕರುನಾಡಿಗೆ ಅಂತಿಮ ವಿದಾಯ ಹೇಳಿಬಿಟ್ಟಿದ್ದಾನೆ.
ಹಲವರ ಪ್ರಕಾರ ಅರ್ಜುನ ಸಾವಿಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿಯೇ ಕಾರಣವಾಗಿದೆ. ನಾಲ್ಕು ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದ ಅರ್ಜುನನಿಗೆ ಈಗ ೬೪ ವರ್ಷ. ಇಷ್ಟೊಂದು ವಯಸ್ಸಾದ ಸಾಕಾನೆಯನ್ನು ಕಾಡಾನೆ ಸೆರೆಗೆ ಬಳಸಿಕೊಂ ಡದ್ದೇ ಬಹಳ ದೊಡ್ಡ ಲೋಪ ಎಂಬ ಆರೋಪ ಕೇಳಿ ಬಂದಿದೆ. ಇಲ್ಲಿ ಮತ್ತೊಂದು ವಿಚಾರವೂ ಇದೆ. ಅರ್ಜುನ ಕಾರ್ಯಾ ಚರಣೆಗೆ ಮುನ್ನವೇ ಮಸ್ತ್ಗೆ ಬಂದಿದ್ದ. ಹಾಗೇ ಎದುರಾಳಿ ಕಾಡಾನೆ ಕೂಡ ಮಸ್ತ್ನಲ್ಲಿತ್ತು. ಇಂಥ ಪರಿಸ್ಥಿತಿಯಲ್ಲಿ ಎರಡೂ ಆನೆಗಳು ಮುಖಾಮುಖಿಯಾದ ಸಂದರ್ಭ ಬಹಳ ಭಯಾನಕ ಕಾಳಗವೇ ಮದಗಜಗಳ ನಡುವೇ ಸಂಭವಿಸು ತ್ತದೆ. ಅಂಥಹುದ್ದೇ ಘಟನೆ ಎಸ ಳೂರು ಕಾಡಿನಲ್ಲಿಯೂ ನಡೆದು ಎರಡು ಎಕರೆಗಳಷ್ಟು ಪ್ರದೇಶಗಳಲ್ಲಿ ಮದಗಜಗಳು ಕಾದಾಡುತ್ತಾ ಸಾಗಿ ನೂರಾರು ಮರಗಿಡಗಳನ್ನು ಹಾನಿ ಮಾಡಿವೆ. ಮಸ್ತ್ನಲ್ಲಿದ್ದ ಅರ್ಜುನ ಇಂಥ ಸಂದರ್ಭ ಮಾವುತನ ಮಾತು ಕೇಳುವುದೇ ಕಷ್ಟ. ಇದು ಗೊತ್ತಿದ್ದರೂ ಅರ್ಜುನನನ್ನು ಕಾರ್ಯಾಚರಣೆಗೆ ಬಳಸಿಕೊಂಡದ್ದು ಏಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಬೇಕಾಗಿದೆ.
ಭಾರತದಲ್ಲಿ ಕರ್ನಾಟಕದಲ್ಲಿಯೇ ಅತ್ಯಧಿಕ ಸಂಖ್ಯೆಯ ಕಾಡಾನೆಗಳಿವೆ. ಹಾಗೇ ರಾಜ್ಯದ ಮಲೆನಾಡು ಜಿಲ್ಲೆಗ ಳಲ್ಲಿ ಕಾಡಾನೆ ದಾಂಧಲೆ ವಿಪರೀತ ವಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಕಾಡಾ ನೆಗಳ ಸೆರೆಗೆ ಎಲ್ಲಾ ರೀತಿಯಲ್ಲಿ ಸನ್ನದ್ಧವಾಗಿರಬೇಕಾದ ಅರಣ್ಯ ಇಲಾ ಖೆಯಲ್ಲಿ ಮುಖ್ಯವಾಗಿ ಬೇಕಾದ ವೈದ್ಯಾಧಿಕಾರಿಗಳು, ಶಾರ್ಪ್ ಶೂಟರ್ಗಳೇ ಇಲ್ಲ.. ಇದರಿಂದಾಗಿ ಸುಲಭವಾಗಿ ನಡೆಯಬೇಕಾದ ಕಾರ್ಯಾಚರಣೆ ಕಷ್ಟಸಾಧ್ಯವಾಗುತ್ತಾ, ಕೆಲವೊಮ್ಮೆ ಕಾಡಾನೆ ಅಥವಾ ಅರ್ಜುನನಂಥ ಸಾಕಾನೆಗಳ ಸಾವಿನಲ್ಲಿ ಕೊನೆಯಾಗುತ್ತಿದೆ.
ಅರಣ್ಯ ಇಲಾಖೆಯಲ್ಲಿನ ನುರಿತ ಸಾಕಾನೆಗಳನ್ನು ಕರ್ನಾಟಕ ಸರ್ಕಾರ ಬೇರೆ ರಾಜ್ಯಗಳಿಗೆ ಮಾರಾಟ ಮಾಡಿದೆ. ಆಂಧ್ರಪ್ರದೇಶಕ್ಕೆ ೨೨ ಮತ್ತು ಮಧ್ಯಪ್ರದೇಶಕ್ಕೆ ೨ ಸಾಕಾನೆಗಳನ್ನು ಮಾರಾಟ ಮಾಡಲಾಗಿದೆ. ಈ ಆನೆಗಳು ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಪರಿಣಿತವಾಗಿದ್ದ ಕುಂಮ್ಕಿ ಆನೆಗಳಾಗಿದ್ದವು. ಹೀಗಾಗಿ, ಸದ್ಯಕ್ಕೆ ರಾಜ್ಯದಲ್ಲಿ ಕೆಲವೇ ಕೆಲವು ಸಾಕಾನೆಗಳನ್ನು ಬಳಸಿಕೊಂಡು ಕಾಡಾ ನೆಗಳನ್ನು ಸೆರೆ ಹಿಡಿಯಬೇಕಾದ ದುಸ್ಥಿತಿಯಿದೆ. ವಯಸ್ಸಾದರೂ ಪರ ವಾಗಿಲ್ಲ, ಮೂಳೆ ಸವಿದಿದ್ದರೂ ಪರವಾಗಿಲ್ಲ, ಶಕ್ತಿ ಕುಂದಿದ್ದರೂ ಸಮಸ್ಯೆಯಿಲ್ಲ, ಕಾಡಾನೆ ಸೆರೆಯ ಕಾರ್ಯಾಚರಣೆಯಲ್ಲಿ ಪಳಗಿದ್ದಾನೆ ಎಂಬ ಕಾರಣದಿಂದ ಅರ್ಜುನನಂಥ ನಿವೃತ್ತಿಯಲ್ಲಿರುವ ಸಾಕಾನೆಯನ್ನು ಇಲಾಖೆ ಬಳಸಿಕೊಳ್ಳುವ ಅನಿ ವಾರ್ಯತೆ ಎದುರಾಗಿರಬಹುದು.
ದಬ್ಬಳ್ಳಿಕಟ್ಟೆ ಕಾಡಿನಲ್ಲಿ ಮುಗಿಲು ಮುಟ್ಟಿದ ಆಕ್ರಂದನ
ಸೋಮವಾರ ಸಾವನ್ನಪ್ಪಿದ ಅರ್ಜುನ ಆನೆಯ ಅಂತ್ಯಕ್ರಿಯೆ ಕಣ್ಣೀರುಗರೆದರು. ಸ್ಥಳದಲ್ಲಿ ಹಾಜರಿ ದ್ದವರ ಅಳು ಕೂಡ ಕಾಡಿನ ಮಣ್ಣಿ ನಲ್ಲಿ ಸೇರಿಹೋಗುತ್ತಿತ್ತು.
ಅರ್ಜುನನ ಸಾವಿಗೆ ಅರಣ್ಯಾ ಧಿಕಾರಿಗಳೇ ಕಾರಣ ಎಂದು ಸ್ಥಳೀಯರು ಆಗಿಂದಾಗ್ಗೆ ಆಕ್ರೋಶ ಹೊರಹಾಕುತ್ತಿದ್ದರು. ಅರಣ್ಯಾಧಿಕಾರಿ ಗಳೇ ಸಾವಿಗೆ ನೇರಹೊಣೆ. ಇವರೆ ಲ್ಲರ ಮೇಲೆ ಸರ್ಕಾರ ಕ್ರಮಕೈಗೊಳ್ಳ ಬೇಕು. ಅರ್ಜುನನ ಸಾವಿಗೆ ನ್ಯಾಯ ಒದಗಿಸುವಂತೆಯೂ ಘೋಷಣೆ ಕೂಗಿದರು. ಈ ಸಂದರ್ಭ ಹಾಸನ ದಿಂದ ಹೆಚ್ಚುವರಿ ಪೊಲೀಸ್ ಪಡೆ ಯನ್ನು ಸ್ಥಳಕ್ಕೆ ತರಿಸಿಕೊಂಡು ಬಂದೋ ಬಸ್ತ್ ಬಿಗಿಗೊಳಿಸಲಾಯಿತು.
ಮಂಗಳವಾರ ಬೆಳಿಗ್ಗೆ ಮೈಸೂರಿ ನಿಂದ ಬಂದಿದ್ದ ಅನೇಕರು, ಇದು ಪಟ್ಟದಾನೆಯಾಗಿದೆ. ಹೀಗಾಗಿ ಎಲ್ಲೆಂ ದರಲ್ಲಿ ಮಣ್ಣು ಮಾಡಬೇಡಿ, ನಾವು ಮೈಸೂರಿಗೆ ಅರ್ಜುನನನ್ನು ಕೊಂಡೊ ಯ್ಯುತ್ತೇವೆ. ಅವಕಾಶ ನೀಡಿ ಎಂದು ಪಟ್ಟು ಹಿಡಿದರು. ಆದರೆ ಮೈಸೂರು ಅರಮನೆಯ ಪುರೋಹಿತರಾದ ಪ್ರಹ್ಲಾದ್ ಅವರು, ಅರ್ಜುನ ಕೊನೆ ಉಸಿರು ಎಳೆದ ಸ್ಥಳದಲ್ಲಿಯೇ ಅಂತ್ಯ ಸಂಸ್ಕಾರ ಮಾಡಿದರೆ ಮಾತ್ರ ಆತನಿಗೆ ಸದ್ಗತಿ ಸಿಗಲಿದೆ. ಮೊದಲೇ ಸಾಕಷ್ಟು ನೋವು ತಿಂದಿದ್ದಾನೆ. ಮತ್ತಷ್ಟು ನೋವು ನೀಡದೇ ಸಮಾಧಾನದಿಂದ ಕಳುಹಿಸಿಕೊಡಿ ಎಂದು ಮನವಿ ಮಾಡಿದ ಮೇರೆಗೆ ಮೈಸೂರಿಗರು ಅದೇ ಸ್ಥಳದಲ್ಲಿಯೇ ಅಂತ್ಯಕ್ರಿಯೆಗೆ ಸಮ್ಮತಿ ಸೂಚಿಸಿದರು.ಹಾಸನ ಜಿಲ್ಲಾಧಿಕಾರಿ ಸತ್ಯಭಾಮ, ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್, ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಹಾಸನ ಜಿಲ್ಲಾ ಪೊಲೀಸ್ ಸಶಸ್ತç ಪಡೆಯಿಂದ ಮೂರು ಸುತ್ತು ಕುಶಲತೋಪು ಸಿಡಿಸಿದ ಬಳಿಕ ಜನಸ್ತೋಮದ ಕಣ್ಣೀರ ಕಡಲಿನ ನಡುವೇ ಅರ್ಜುನನನ್ನು ಗುಂಡಿಗೆ ಹಾಕಲಾಯಿತು. ಈ ಸ್ಥಳದಲ್ಲಿ ಅರ್ಜುನನ ಸ್ಮಾರಕ ಮಾಡುವಂತೆಯೂ ಸ್ಥಳೀಯರು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದರು. ಮೈಸೂರು ಅರಮನೆಯ ದ್ವಾರಕ್ಕೆ ಅಂಬಾರಿ ಆನೆಯಾಗಿದ್ದ ಮಾರ್ತಾಂಡನ ಹೆಸರಿನಲ್ಲಿ ಮಾರ್ತಾಂಡ ದ್ವಾರ ಎಂದು ಹೆಸರಿಟ್ಟಿರುವಂತೆಯೇ ಅರ್ಜುನನ ಹೆಸರನ್ನೂ ದ್ವಾರಕ್ಕೆ ಇಡಬೇಕೆಂಬ ಬೇಡಿಕೆಯೂ ಕೇಳಿಬಂತು.
ಅತ್ತ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಕಲಾಪದಲ್ಲಿಯೂ ಉಭಯ ಸದನಗಳಲ್ಲಿ ಅರ್ಜುನನ ಸಾವಿಗೆ ಒಂದು ನಿಮಿಷ ಮೌನದ ಮೂಲಕ ಸಂತಾಪ ಸೂಚಿಸ ಲಾಯಿತು. ಅರಣ್ಯ ಸಚಿವ ಈಶ್ವರ ಖಂಡ್ರೆ, ಕೊಡಗು ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜ್, ಶಾಸಕ ರಾದ ಎ.ಎಸ್. ಪೊನ್ನಣ್ಣ, ಡಾ. ಮಂಥರ್ ಗೌಡ ಸೇರಿದಂತೆ ಕೊಡಗು, ಹಾಸನ, ಚಿಕ್ಕಮಗಳೂರಿನ ಶಾಸಕರು ಸಭೆ ನಡೆಸಿ ಕಾಡಾನೆ ದಾಂಧಲೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ ಬೆಳವಣಿಗೆ ಕೂಡ ನಡೆಯಿತು. ತನ್ನ ಜೀವನದ ಅಂತ್ಯಕಾಲದಲ್ಲಿಯೂ ಹಲವರ ಜೀವ ಉಳಿಸಿದ ಅರ್ಜುನನಿಗೆ ಸೈನಿಕ ನೋರ್ವ ಹುತಾತ್ಮನಾದ ಸಂದರ್ಭ ನೀಡಲಾಗುವ ಗೌರವವು ನೆನಪಿಗೆ ಬರುವಂತೆ ಅಂತಿಮ ವಿದಾಯ ಹೇಳಿದ್ದು ವಿಶೇಷ. ಅದುವೇ ಅರ್ಜುನನ ಜನಪ್ರಿಯತೆ. ..ಪ್ರತಿಷ್ಟೆ.
ಮೈಸೂರು ದಸರಾ ಮಹೋ ತ್ಸವದಲ್ಲಿ ೮ ವರ್ಷಗಳ ಕಾಲ ಚಿನ್ನದ ಅಂಬಾರಿ ಹೊತ್ತು ರಾಜ ಗಾಂಭೀರ್ಯದಿAದ ಸಾಗಿದ್ದ, ನಿವೃತ್ತಿ ನಂತರವೂ ಕಾಡಾನೆಗಳ ಸೆರೆಗೆ ಸಹಕಾರ ನೀಡುತ್ತಿದ್ದ, ನಂತರವೂ ದಸರಾದಲ್ಲಿ ಅಂಬಾರಿ ಆನೆಯಾಗಿದ್ದ ಕೊಡಗಿನ ಅಭಿಮನ್ಯುವಿಗೆ ದಾರಿ ತೋರುವ ಮುಂಚೂಣಿ ನಿಶಾನೆ ಆನೆಯಾಗಿದ್ದ ಕಾಕನಕೋಟೆ ಎಂಬ ದಟ್ಟಾರಣ್ಯದಲ್ಲಿ ಜನಿಸಿದ್ದ ಅರ್ಜುನ ಕೊನೆಗೂ ದಾರಿ ಕಾಣದಂತೆ ಕಾಡಿನಲ್ಲಿಯೇ ಸಾವನ್ನಪ್ಪಿದ್ದು ವಿಪರ್ಯಾಸ. ಕಾಡಾನೆ ಸೆರೆಹಿಡಿದು ಬೀಗಬೇಕಾಗಿದ್ದ ಪರಾಕ್ರಮಿ ಅರ್ಜುನ ತನ್ನದಲ್ಲದ ತಪ್ಪಿಗೆ ಕೊನೆ ಉಸಿ ರೆಳೆದ... ಆದರೆ, ತನ್ನ ಸಾವಿಗೆ ಕಾರಣ ಏನು? ಎಂಬ ಪ್ರಶ್ನೆಯನ್ನು ಕಾಡಿನಲ್ಲಿಯೇ ಬಿಟ್ಟುಹೋದ.. ತನ್ನ ನೆನಪಿನಂತೆಯೇ...