ಮುಳ್ಳೂರು, ಡಿ. ೫: ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದುಂಡಳ್ಳಿ ಗ್ರಾ.ಪಂ. ಹಾಗೂ ಡಿಜಿಟಲ್ ಗ್ರಂಥಾಲಯ ಸಂಯುಕ್ತ ಆಶ್ರಯದಲ್ಲಿ ಗ್ರಂಥಾಲಯ ಇಲಾಖೆಯ ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ ‘ಬಾಲ್ಯವನ್ನು ಆನಂದಿಸಿ, ಬೆಳೆಯುತ್ತಾ ಸಾಗಿ ಅಭಿಯಾನ’ ಕಾರ್ಯಕ್ರಮವನ್ನು ಡಿಜಿಟಲ್ ಗ್ರಂಥಾಲಯದಲ್ಲಿ ಹಮ್ಮಿಕೊಳ್ಳಲಾಯಿತು.

ಮಕ್ಕಳಲ್ಲಿ ಬಾಲ್ಯವನ್ನು ಸಂಭ್ರಮಿಸುವುದು ಇದರ ಜೊತೆಯಲ್ಲಿ ಒಟ್ಟಿಗೆ ಬೆಳೆಯುವ ಅವಕಾಶವನ್ನು ಪಡೆದುಕೊಳ್ಳುವ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳಲ್ಲಿ ಬಾಲ್ಯವನ್ನು ಆನಂದಿಸಿ ಬೆಳೆಯುತ್ತಾ ಸಾಗಿ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ದುಂಡಳ್ಳಿ ಗ್ರಾ.ಪಂ. ಡಿಜಿಟಲ್ ಗ್ರಂಥಾಲಯದ ಮೇಲ್ವಿಚಾರಕಿ ಎಸ್.ಪಿ. ದಿವ್ಯ ಅಭಿಯಾನ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಗ್ರಂಥಾಲಯಗಳಿಗೆ ಭೇಟಿ ನೀಡುವ ಮಕ್ಕಳಿಗೆ ಸಾಹಿತ್ಯ, ವಿಜ್ಞಾನ ಪುಸ್ತಕ ಸೇರಿದಂತೆ ಇತರೆ ಭಾಷೆಯ ಪುಸ್ತಕ, ಪ್ರಾಣಿ ಪಕ್ಷಿ ಸೇರಿದಂತೆ ವನ್ಯಜೀವಿ ಕುರಿತಾದ ಪುಸ್ತಕ, ಪ್ರಖ್ಯಾತ ಸಾಹಿತಿಗಳು ಬರೆದಿರುವ ಕೃತಿಗಳು ಮುಂತಾದ ಸಮಗ್ರ ಮಾಹಿತಿಗಳನ್ನು ಒಳಗೊಂಡ ಪುಸ್ತಕಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿ ಅರಿವು ಮೂಡಿಸಲಾಗಿತು. ಅಭಿಯಾನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಡಲ ತೀರದ ದೃಶ್ಯ, ಮಾರುಕಟ್ಟೆ, ಜಾತ್ರೆ, ಆಟದ ಮೈದಾನ ಮುಂತಾದ ದೃಶ್ಯಗಳನ್ನು ಚಿತ್ರ ಬಿಡಿಸುವ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಯಿತು.

ಮಕ್ಕಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ, ಆಶು ಭಾಷಣ ಸ್ಪರ್ಧೆ ವೇದಿಕೆಯಲ್ಲಿ ಭಾಷಣ ಮಾಡುವುದು ಮುಂತಾದ ವಿಚಾರಗಳ ಬಗ್ಗೆ ಮಕ್ಕಳು ನಿಸಂಕೋಚ ಬೆರೆಯುವ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಯಿತು.