ಮಡಿಕೇರಿ, ಡಿ. ೫: ಶಿಕ್ಷಣ ಫೌಂಡೇಶನ್ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಭಾಗಿತ್ವದಲ್ಲಿ ಗ್ರಾಮ ಡಿಜಿ ವಿಕಸನದ ಕಾರ್ಯಕ್ರಮವನ್ನು ಕೊಡಗು ಜಿಲ್ಲೆಯ ೬೧ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಕಳೆದ ಸಾಲಿನಲ್ಲಿ ೩೮ ಗ್ರಾಮ ಪಂಚಾಯಿತಿ ಗ್ರಂಥಾಲಯಳಗಳಲ್ಲಿ ಅನುಷ್ಠಾನ ಮಾಡಲಾಗಿದೆ. ಈ ಸಾಲಿನಲ್ಲಿ ೨೩ ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ಡಿಜಿಟಲ್ ಸಾಧನಗಳನ್ನು ವಿತರಣೆ ಮಾಡಲಾಯಿತು.
ಕೊಡಗು ಜಿಲ್ಲೆಯ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ವ್ಯವಸ್ಥಾಪಕ ರವೀಂದ್ರ ಅಧ್ಯಕ್ಷತೆಯಲ್ಲಿ ಡಿಜಿಟಲ್ ಸಾಧನಗಳ ವಿತರಣಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಭೆಯಲ್ಲಿ ೨೧ ಗ್ರಾಮ ಪಂಚಾಯಿತಿಗಳ ಗ್ರಂಥಾಲಯ ಮೇಲ್ವಿಚಾರಕರಿಗೆ ತರಬೇತಿಯನ್ನು ನೀಡಲಾಯಿತು.
ತರಬೇತಿಯಲ್ಲಿ ಪ್ರಮುಖವಾಗಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮವು ಗ್ರಾಮೀಣ ಪ್ರದೇಶದಲ್ಲಿ ಯುವಜನರು ಮತ್ತು ಸಮುದಾಯದವರು ತಂತ್ರ ಜ್ಞಾನ ಕೌಶಲ್ಯ ಮತ್ತು ಶೈಕ್ಷಣಿಕ ವಿಷಯಗಳು ಮತ್ತು ೨೧ನೇ ಶತಮಾನದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವಲ್ಲಿ ಹೇಗೆ ಸಹಕಾರಿಯಾಗಿದೆ ಎಂದು ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ರಕ್ಷಿತ್ ಮಾಹಿತಿ ನೀಡಿದರು. ಅದೇ ರೀತಿ ಗ್ರಂಥಪಾಲಕರು ದಿನನಿತ್ಯ ನಿರ್ವಹಿಸಬೇಕಾದ ಗ್ರಂಥಾಲಯ ಚಟುವಟಿಕೆಗಳನ್ನು ನಿರ್ವಹಣೆ ಮಾಡುವುದು ಮತ್ತು ಗ್ರಂಥಾಲಯದ ನೊಂದಾವಣಿಯನ್ನೂ ಕನಿಷ್ಟ ಪ್ರತಿ ಗ್ರಂಥಪಾಲಕರು ೧೦೦೦ ಸದಸ್ಯತ್ವವನ್ನೂ ಮಾಡಲು ಅವರು ತಿಳಿಸಿದರು.
ನಂತರ ಈ ಶೈಕ್ಷಣಿಕ ಸಾಲಿನಲ್ಲಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾದ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ೫ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಸ್ಮಾರ್ಟ್ ಫೋನ್ ಅನ್ನು ವಿತರಿಸಲಾಯಿತು.
ಈ ಸಂದರ್ಭ ತಾಲೂಕು ಪಂಚಾಯಿತಿ ವ್ಯವಸ್ಥಾಪಕರಾದ ರವೀಂದ್ರ ಮತ್ತು ರವಿ ಹಾಗೂ ಜಿಲ್ಲಾ ಸಂಯೋಜಕ ರಕ್ಷಿತ್, ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ಸಂಯೋಜಕ ಸುಜನ್ ಕೆ.ಎನ್, ಮಡಿಕೇರಿ ತಾಲೂಕಿನ ಸಂಯೋಜಕಿ ರಶ್ಮಿತಾ ಹಾಗೂ ೨೧ ಗ್ರಂಥಾಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು.