ಸಿದ್ದಾಪುರ, ಡಿ. ೬: ಬುಡಕಟ್ಟು ಸಮುದಾಯದ ಬಾಂಧವರು ಕಿರು ಉದ್ಯಮ ಶೀಲತೆ ಅಭಿವೃದ್ಧಿಯ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲು ನಬಾರ್ಡ್ ಮತ್ತು ಓಡಿಪಿ ಸಂಸ್ಥೆ-ಮೈಸೂರು ಸಹಭಾಗಿತ್ವದಲ್ಲಿ ವಾಲ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಗುಂಡಿಯ ೨೦ ಆದಿವಾಸಿ ಕುಟುಂಬಗಳಿಗೆ ೧೦೦೦ ಕೋಳಿ ಮರಿಗಳು, ೬೦ ಕುಟುಂಬಗಳಿಗೆ ಸರಳ ಒಲೆಗಳನ್ನು ವಿತರಣೆ ಮಾಡಲಾಯಿತು.

ಬಾಳೆಗುಂಡಿ ಅಂಗನವಾಡಿ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದ್ದ ಕೋಳಿ ಮರಿ ವಿತರಣಾ ಕಾರ್ಯಕ್ರಮದಲ್ಲಿ ನಬಾರ್ಡ್ ಸಂಸ್ಥೆಯ ಕೊಡಗು ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಅಧಿಕಾರಿ ರಮೇಶ್ ಬಾಬು ಶಿಬಿರ ಉದ್ಘಾಟಿಸಿ ಮಾತನಾಡಿ, ನಬಾರ್ಡ್ ಸಂಸ್ಥೆ ಓಡಿಪಿ ಸಂಸ್ಥೆಯ ಮೂಲಕ ಗ್ರಾಮೀಣ ಭಾಗದಲ್ಲಿ ಹಿಂದುಳಿದಿರುವ ಆದಿವಾಸಿ ಕುಟುಂಬಗಳಿಗೆ ಆರ್ಥಿಕವಾಗಿ ಸ್ವಉದ್ಯೋಗದೊಂದಿಗೆ ಸ್ವಾವಲಂಬಿಗಳಾಗಿ ಅಭಿವೃದ್ಧಿ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಮುಂದೆ ಬರಬೇಕೆಂದರು. ಓಡಿಪಿ ಸಂಸ್ಥೆಯ ನಿರ್ದೇಶಕ ಗುರುಸ್ವಾಮಿ ಅಲೆಕ್ಸ್ ಪ್ರಶಾಂತ್ ಸಿಕ್ವೆರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಓಡಿಪಿ ಸಂಸ್ಥೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾವಿರಾರು ಮಹಿಳೆಯರಿಗೆ ಸ್ವಉದ್ಯೋಗ ಕಲ್ಪಿಸಿಕೊಟ್ಟಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವವರು ಸ್ವಉದ್ಯೋಗದ ಮೂಲಕ ಸ್ವಾವಲಂಬಿಗಳಾಗಿ ದುಡಿಮೆಯ ಮೂಲಕ ಅಭಿವೃದ್ಧಿಯೊಂದಿಗೆ ಗುರುತಿಸಿಕೊಂಡು ಕುಟುಂಬ ನಿವಾರಣೆಯೊಂದಿಗೆ ಮುನ್ನಡೆಯಲು ಕಿರು ಉದ್ಯಮಶೀಲತೆಯ ಮೂಲಕ ಮೊದಲನೇ ಹಂತದಲ್ಲಿ ಆದಿವಾಸಿ ಕುಟುಂಬಗಳಿಗೆ ಕೋಳಿ ಮರಿಗಳ ವಿತರಣೆ ಮಾಡಲಾಗಿದೆ ಎಂದರು.

ಈ ಸಂದರ್ಭ ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಂಜುAಡಸ್ವಾಮಿ, ಬಾಳೆಗುಂಡಿ ಹಾಡಿಯ ಆದಿವಾಸಿ ಮುಖಂಡ ರಮೇಶ್, ಓಡಿಪಿ ಸಂಸ್ಥೆಯ ಸಂಯೋಜಕರಾದ ಜೋಯ್ಸ್ ಮೆನೇಜಸ್, ಹೇಮಂತ್, ಯೋಜನಾ ಸಂಯೋಜಕ ಮೆಲ್ವಿನ್, ಕಾರ್ಯಕರ್ತರಾದ ಧನು ಕುಮಾರ್, ಮಮತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.