ಬೆಂಗಳೂರು, ಡಿ. ೩ : ಪಂಚರಾಜ್ಯಗಳ ಚುನಾವಣಾ ಪೈಕಿ ನಾಲ್ಕು ರಾಜ್ಯಗಳ ಫಲಿತಾಂಶ ಪ್ರಕಟಗೊಂಡಿದ್ದು, ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ. ಮತ್ತೊಂದೆಡೆ ತೆಲಂಗಾಣ ರಾಜ್ಯ ಉದಯಕ್ಕೆ ಅವಿರತ ಹೋರಾಟ ನಡೆಸಿದ್ದ ಕೆ.ಸಿ. ಚಂದ್ರಶೇಖರರಾವ್ ಅವರ ಬಿಆರ್‌ಎಸ್ ಕೋಟೆಯನ್ನು ಭೇದಿಸುವಲ್ಲಿ ಕಾಂಗ್ರೆಸ್ ಸಫಲವಾಗಿದೆ. ರಾಜಸ್ಥಾನ, ಛತ್ತಿಸ್‌ಗಢದಲ್ಲಿ ಕಾಂಗ್ರೆಸ್ ಆಡಳಿತದ ಕೋಟೆಯನ್ನು ಬೇಧಿಸಿ ಬಿಜೆಪಿ ಬಹುಮತ ಪಡೆದು ವಿಜಯಮಾಲೆಗೆ ಕೊರಳೊಡ್ಡಿದೆ.

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಹಾಗೂ ಮಿಜೋರಾಂ ರಾಜ್ಯಗಳ ವಿಧಾನಸಭೆಗೆ ಇತ್ತೀಚೆಗೆ ಮತದಾನ ನಡೆದಿತ್ತು. ಮಿಜೋರಾಂ ಹೊರತುಪಡಿಸಿ ಉಳಿದ ನಾಲ್ಕು ರಾಜ್ಯಗಳ ಮತ ಎಣಿಕೆ ಕಾರ್ಯ ಭಾನುವಾರ ನಡೆಯಿತು.

ನ. ೩೦ರಂದು ಸಂಜೆ ಪ್ರಕಟಗೊಂಡ ಮತಗಟ್ಟೆ ಸಮೀಕ್ಷಾ ವರದಿಗಳು ಛತ್ತೀಸ್‌ಗಢ ಹೊರತುಪಡಿಸಿ ಉಳಿದೆಡೆ ಬಹುತೇಕ ನಿಜವಾಗಿವೆ. ಛತ್ತೀಸ್‌ಗಢದಲ್ಲಿ ಬಿಜೆಪಿ ನಿರೀಕ್ಷೆಯನ್ನೂ ಮೀರಿ ಕಾಂಗ್ರೆಸ್ ಎದುರು ಗೆಲುವು ಸಾಧಿಸಿದೆ. ಛತ್ತೀಸ್‌ಗಢ ವಿಧಾನಸಭೆಯ ಒಟ್ಟು ೯೦ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ೫೪ ಸ್ಥಾನಗಳನ್ನು ಗೆಲ್ಲುವ ಮೂಲಕ ಮ್ಯಾಜಿಕ್ ಸಂಖ್ಯೆ ೪೬ ಅನ್ನು ದಾಟಿದೆ. ಕಾಂಗ್ರೆಸ್ ೩೫ ಸ್ಥಾನಗಳನ್ನು ಪಡೆದುಕೊಂಡಿದೆ.

೨೩೦ ಸ್ಥಾನಗಳ ಮಧ್ಯಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ ತೀವ್ರ ಪೈಪೋಟಿ ನೀಡಿತ್ತು. ಬರಲಿರುವ ಲೋಕಸಭಾ ಚುನಾವಣೆಯನ್ನು ಗಮದಲ್ಲಿಟ್ಟುಕೊಂಡು ದೊಡ್ಡ ರಾಜ್ಯವಾದ ಮಧ್ಯಪ್ರದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಮಧ್ಯಪ್ರದೇಶದಲ್ಲಿ ಬಿಜೆಪಿ ೧೬೪ ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಕಾಂಗ್ರೆಸ್ ೬೫ ಕ್ಷೇತ್ರಗಳಲ್ಲಿ ಹಾಗೂ ಭಾರತ್ ಆದಿವಾಸಿ ಪಕ್ಷವು ಒಂದು ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ತನ್ನ ಚೊಚ್ಚಲ ಗೆಲುವು ದಾಖಲಿಸಿದೆ.

ರಾಷ್ಟಿçÃಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನ ತೀವ್ರ ಪೈಪೋಟಿಯ ಕ್ಷೇತ್ರ ಎಂದೇ ಬಿಂಬಿತವಾಗಿದ್ದ ರಾಜಸ್ತಾನ ಅತಿ ಹೆಚ್ಚು ಸುದ್ದಿಯಲ್ಲಿತ್ತು. ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆಯ ಸಫಲತೆಯಲ್ಲಿ ತೇಲುತ್ತಿದ್ದ ಕಾಂಗ್ರೆಸ್‌ನ ಗೆಲುವಿನ ವಿಶ್ವಾಸಕ್ಕೆ ಗುಜರಾತ್‌ನ ಜೋಡಿ ತಣ್ಣೀರೆರಚಿದೆ.

ಗ್ಯಾರಂಟಿ ಘೋಷಣೆಯ ನಡುವೆಯೂ ಕಾಂಗ್ರೆಸ್‌ಅನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ಗೆಹಲೋತ್ ವಿಫಲರಾದರು. ಹಾಲಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಹಾಗೂ ಸಚಿನ್ ಪೈಲಟ್ ನಡುವಿನ ವೈಮನಸ್ಸು ಹಾಗೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿಯೂ ಕಾಂಗ್ರೆಸ್ ಸೋಲಿಗೆ ಕಾರಣ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕಳೆದ ೨೫ ವರ್ಷಗಳ ರಾಜ್ಯ ವಿಧಾನಸಭಾ ಚುನಾವಣೆಯ ಇತಿಹಾಸದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಮತದಾರರು ಪ್ರತಿ ಚುನಾವಣೆಯಲ್ಲೂ ಬದಲಾಯಿಸುತ್ತಲೇ ಬಂದಿದ್ದಾರೆ. ಅದು ೨೦೨೩ರಲ್ಲೂ ಮುಂದುವರಿದಿದೆ.

ಚುನಾವಣೆ ಘೋಷಣೆ ನಂತರ ಶ್ರೀಗಂಗಾನಗರದ ಕರಣಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಗುರ್ಮೀತ್ ಸಿಂಗ್ ಕೂನಾರ್ ಮೃತಪಟ್ಟಿದ್ದರು. ಹೀಗಾಗಿ ಮತದಾನ ನಡೆದ ೧೯೯ ಕ್ಷೇತ್ರಗಳಲ್ಲಿ ಬಿಜೆಪಿ ೧೧೫, ಕಾಂಗ್ರೆಸ್ ೬೯, ಭಾರತ್ ಆದಿವಾಸಿ ಪಕ್ಷ ೩, ಸ್ವತಂತ್ರ ಅಭ್ಯರ್ಥಿಗಳು ೭, ಬಿಎಸ್‌ಪಿ ೨ ಕ್ಷೇತ್ರಗಳಲ್ಲಿ ಜಯ ಸಾಧಿಸಿವೆ.

ಬಿಆರ್‌ಎಸ್ ಕೋಟೆಯನ್ನು ಭೇದಿಸಬೇಕೆಂಬ ಹಂಬಲ ಹೊಂದಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಪೈಪೋಟಿಯಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ.

ಕರ್ನಾಟಕದ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಉಸ್ತುವಾರಿಯಲ್ಲಿ ತೆಲಂಗಾಣ ಕಾಂಗ್ರೆಸ್ ಈ ಚುನಾವಣೆ ಎದುರಿಸಿತ್ತು. ಹ್ಯಾಟ್ರಿಕ್ ಕನಸು ಕಾಣುತ್ತಿದ್ದ ಕೆಸಿಆರ್‌ಗೆ ತೀವ್ರ ಆಘಾತ ತಂದಿದ್ದಾರೆ.

೧೧೯ ಸ್ಥಾನಗಳ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ೬೫, ಬಿಆರ್‌ಎಸ್ ೩೯, ಬಿಜೆಪಿ ೮, ಎಐಎಂಐಎA ೭ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಖ್ಯಾತ ಚಿತ್ರನಟ ಪವರ್‌ಸ್ಟಾರ್ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಹೀನಾಯ ಸೋಲು ಅನುಭವಿಸಿ ಮುಖಭಂಗ ಅನುಭವಿಸಿದೆ. ಸೋಮವಾರ ನಡೆಯಲಿರುವ ಮಿಜೋರಾಂ ರಾಜ್ಯದ ಮತಎಣಿಕೆಯ ಫಲಿತಾಂಶದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.