ಪೊನ್ನಂಪೇಟೆ, ಡಿ.೩: ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಹೋಬಳಿಯ ಹೈಸೊಡ್ಲೂರು ಗ್ರಾಮದ ಐಗುಂದ ಬಳಿಯ ಕೂಟಿಯಾಲ ಹೊಳೆಯಲ್ಲಿ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಶವ ಪತ್ತೆಯಾಗಿದೆ.
ಹುದಿಕೇರಿ ಭಾಗದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸೇವಾ ಯೋಜನೆ ಸೇವಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದ ಅಶ್ವಿನಿ (೪೮), ಮಕ್ಕಳಾದ ನಿಕಿತಾ (೨೧), ನವ್ಯ(೧೮) ಮೃತಪಟ್ಟಿರುವ ದುರ್ದೈವಿಗಳು.
ಮೂವರ ಶವ ಇಂದು ಕೂಟಿಯಲ ಹೊಳೆಯಲ್ಲಿ ಪತ್ತೆಯಾಗಿದೆ. ಮೂಲತಃ ಮಾದಾಪುರ ಗ್ರಾಮದ ನಿವಾಸಿಯಾದ ಅಶ್ವಿನಿ ಕಳೆದ ಆರು ವರ್ಷಗಳಿಂದ ಹುದಿಕೇರಿಯಲ್ಲಿ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದರು. ಹುದಿಕೇರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇವರು ಹೈಸೊಡ್ಲೂರು ಬಳಿಯ ಐಗುಂದದಲ್ಲಿ ಒಂದು ಎಕರೆ ಕಾಫಿ ತೋಟವನ್ನು ಕೂಡ ಹೊಂದಿದ್ದರು.
ಶನಿವಾರ ಮಧ್ಯಾಹ್ನ ತಮ್ಮ ಸ್ಕೂಟರ್ನಲ್ಲಿ ತಮ್ಮ ತೋಟಕ್ಕೆ ತೆರಳಿರುವುದನ್ನು ಕೆಲವರು ಕಂಡಿದ್ದಾರೆ. ಇಂದು ಸಂಜೆ ಕೂಟಿಯಾಲ ಹೊಳೆ ಸಮೀಪ ತೆರಳಿದ ಕೆಲವರಿಗೆ ಮೃತದೇಹಗಳು ಕಂಡು ಬಂದಿವೆ.
(ಮೊದಲ ಪುಟದಿಂದ) ಘಟನೆಗೆ ಕಾರಣ ತಿಳಿದು ಬಂದಿಲ್ಲ. ಘಟನೆ ನಡೆದ ಸ್ಥಳಕ್ಕೆ ಶ್ರೀಮಂಗಲ ಪೊಲೀಸರು ತೆರಳಿದ್ದು ಪರಿಶೀಲನೆ ನಡೆಸಿ ಮೃತದೇಹ ಮೇಲೆತ್ತುವ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಈ ಘಟನೆ ಆಕಸ್ಮಿಕವಾಗಿ ನಡೆದಿದೆಯೋ? ಅಥವಾ ಆತ್ಮಹತ್ಯೆಯೋ? ಎಂಬುದು ನಿಗೂಢವಾಗಿದೆ. ಮೃತೆ ಅಶ್ವಿನಿಯ ಪತಿ ಮಂಡ್ಯ ಮೂಲದವರಾಗಿದ್ದು, ಮೈಸೂರಿನ ಹೋಟೆಲ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.