ಮಡಿಕೇರಿ, ಡಿ. ೪: ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಒಂದು ವಾರದಿಂದ ನಡೆಯುತ್ತಿದ್ದ ಡಾ. ಅಖಿಲ್ ಕುಟ್ಟಪ್ಪ ಮತ್ತು ಅಶ್ವಥ್ ಅಯ್ಯಪ್ಪ ಸ್ಮರಣಾರ್ಥ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ವಿದ್ಯುಕ್ತ ತೆರೆ ಭಾನುವಾರ ದೊರಕಿತು. ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಉದ್ಘಾಟಿಸಿದ ಈ ಪಂದ್ಯಾವಳಿಯಲ್ಲಿ, ಕೊಡಗಿನ ವಿವಿಧ ಶಾಲೆಗಳ ಏಳು ತಂಡಗಳು ಭಾಗವಹಿಸಿ ಅತ್ಯಂತ ರೋಮಾಂಚಕ ಕ್ರಿಕೆಟ್ ಪ್ರದರ್ಶನ ನೀಡಿದವು.
ಭಾನುವಾರ ನಡೆದ ಫೈನಲ್ನಲ್ಲಿ ಕ್ಯಾಲ್ಸ್ ಗೋಣಿಕೊಪ್ಪ ತಂಡ ಪ್ರಗತಿ ವೀರಾಜಪೇಟೆ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಪ್ರಗತಿ ಶಾಲೆ ಮೊದಲು ಬ್ಯಾಟಿಂಗ್ ಮಾಡಿ ೯೧ ರನ್ಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡರೆ, ಕ್ಯಾಲ್ಸ್ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಗುರಿ ಮುಟ್ಟಿತು.
ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ, ಪಂದ್ಯಾಟದ ಆಯೋಜಕರಾದ ರಘು ಮಾದಪ್ಪ, ಶಕ್ತಿ ಪತ್ರಿಕೆಯ ವ್ಯವಸ್ಥಾಪಕಿ ಪ್ರಜ್ಞಾ ಜಿ.ಆರ್, ಮಂಗಳೂರಿನ ಕ್ರಿಕೆಟ್ ತರಬೇತುದಾರರಾದ ರೆನ್ ಹಾಗೂ ಮಾಜಿ ಮೂಡಾ ಅಧ್ಯಕ್ಷರಾದ ಮುನೀರ್ ಅಹಮ್ಮದ್ ಅತಿಥಿಗಳಾಗಿ ಭಾಗವಹಿಸಿದ್ದರು.
ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಜ್ಞಾ ಅವರು, ಪಂದ್ಯಾಟದ ಆಯೋಜಕರಾದ ರಘು ಮಾದಪ್ಪ ಅÀವರ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕ್ರಿಕೆಟ್ನಲ್ಲಿರುವ ಅವಕಾಶಗಳನ್ನು ಸದುಪಯೋಗಪಡಿಸಿ ಕೊಳ್ಳುವಂತೆ ನೆರೆದಿದ್ದ ಕ್ರೀಡಾಪಟು ಗಳಿಗೆ ಸಲಹೆ ಇತ್ತರು.
ರೆನ್ ಅವರು ಮಾತನಾಡಿ, ಕ್ರಿಕೆಟ್ನಲ್ಲಿ ಅತಿ ಮುಖ್ಯವಾದ ಶಿಸ್ತಿನ ಗುಣವನ್ನು ರೂಢಿಸಿಕೊಂಡು ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದಲ್ಲಿ ತಮ್ಮನ್ನು ಮೊದಲು ಗುರುತಿಸಿಕೊಳ್ಳಲು ಪರಿಶ್ರಮ ಪಡುವಂತೆ ಸಲಹೆ ನೀಡಿದರು. ಡಾ.ಅಖಿಲ್ ಕುಟ್ಟಪ್ಪ ಮತ್ತು ಅಶ್ವಥ್ ಅಯ್ಯಪ್ಪ ಇಂದು ಇಹಲೋಖ ತ್ಯಜಿಸಿದ್ದರೂ, ಅವರಲ್ಲಿ ಇದ್ದ ಕ್ರಿಕೆಟ್ನ ಬಗ್ಗೆಯ ಶಿಸ್ತು ಹಾಗೂ ಸ್ಪೂರ್ತಿ ಇಂದು ಈ ಪಂದ್ಯಾವಳಿಯ ಮೂಲಕ ಜೀವಂತವಾಗಿದೆ ಎಂದು ಮುನೀರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ವಿದ್ಯಾಲಯದ ವ್ಯವಸ್ಥಾಪಕ ರವಿ, ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯ ಎ.ಎಸ್.ಐ ಐಮುಡಿಯಂಡ ನಂದ, ಪ್ರಮುಖರಾದ ಹರೀಶ್ ವೈ.ಎ, ನಂದ ಬಿವಿ ಮತ್ತು ದಿನೇಶ್ ಹಾಜರಿದ್ದರು. ಕೊಡಗು ವಿದ್ಯಾಲಯದ ತರಬೇತಿದಾರರಾದ ದಿವ್ಯ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.