ಮುಳ್ಳೂರು, ಡಿ. ೪ : ಸಂಬಾರ ಮಂಡಳಿ ಹಾಗೂ ಕೊಡ್ಲಿಪೇಟೆ ಹೇಮಾವತಿ ರೋಟರಿ ಕ್ಲಬ್ ಮತ್ತು ಪ್ಲಾಂರ‍್ಸ್ ರಿಕ್ರಿಯೇಷನ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಕೊಡ್ಲಿಪೇಟೆ ಪ್ಲಾಂರ‍್ಸ್ ಕ್ಲಬ್ ಸಭಾಂಗಣದಲ್ಲಿ ರೈತರಿಗೆ ಕಾಳುಮೆಣಸು ಬೆಳೆಯ ಗುಣಮಟ್ಟ ಸುಧಾರಣೆ ಕುರಿತು ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

ತರಬೇತಿ ಕಾರ್ಯಾಗಾರದಲ್ಲಿ ದೋಣಿಗಾಲ್ ಐ.ಸಿ.ಆರ್.ಐ ಪ್ರಾದೇಶಿಕ ಕೇಂದ್ರದ ವಿಜ್ಞಾನಿ ಡಾ.ಕೆ.ಎನ್.ಹರ್ಷ ಕಾಳೆಮೆಣಸು ಬೆಳೆ ನಿರ್ವಹಣೆ, ಗೊಬ್ಬರ, ಔಷಧಿ ಸಿಂಪಡಣೆ, ಇತ್ಯಾದಿ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಸವಿಸ್ತಾರವಾಗಿ ಬೆಳೆಗಾರರಿಗೆ ಮಾಹಿತಿಯಿತ್ತರು.

ಕಾರ್ಯಾಗಾರದಲ್ಲಿ ಸಕಲೇಶಪುರದ ಸಂಬಾರ ಮಂಡಳಿಯ ಹಿರಿಯ ಕ್ಷೇತ್ರಾಧಿಕಾರಿ ಕುಮಾರ್, ಯಸಳೂರು ಸಸ್ಯಪಾಲನ ಕೇಂದ್ರದ ವ್ಯವಸ್ಥಾಪಕ ರಮೇಶ್ ನಾಯಕ್, ಸಂಬಾರ ಮಂಡಳಿಯ ಉಪ ನಿರ್ದೇಶಕ ಎಂ.ವೈ.ಹೊನ್ನೂರು ಬೆಳೆಗಾರರಿಗೆ ತರಬೇತಿ ನೀಡಿದರು

ಕಾರ್ಯಾಗಾರವನ್ನು ಹೇಮಾವತಿ ರೋಟರಿ ಕ್ಲಬ್ ಅಧ್ಯಕ್ಷ ಅಮೃತ್‌ಕುಮಾರ್ ಉದ್ಘಾಟಿಸಿದರು. ಸೋಮವಾರಪೇಟೆ ಸಂಬಾರ ಮಂಡಳಿ ಕ್ಷೇತ್ರಾಧಿಕಾರಿ ಎನ್.ಬಿ.ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಡ್ಲಿಪೇಟೆ ಪ್ಲಾಂರ‍್ಸ್ ಕ್ಲಬ್ ಅಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ಯಾಡಗೊಟ್ಟ ಗ್ರಾ.ಪಂ.ಅಧ್ಯಕ್ಷ ಮಹಮ್ಮದ್ ಹನೀಪ್ ಮಾತನಾಡಿದರು. ವೇದಿಕೆಯಲ್ಲಿ ಬೆಸೂರು ಗ್ರಾ.ಪಂ.ಅಧ್ಯಕ್ಷೆ ಕಮಲಮ್ಮ, ಕೊಡ್ಲಿಪೇಟೆ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಡಿ.ಭಗವಾನ್, ಹೇಮಾವತಿ ರೋಟರಿ ಲೆಫ್ಟಿನೆಂಟ್ ಎಚ್.ಎಂ.ದಿವಾಕರ್ ರೋಟರಿ ಕ್ಲಬ್ ಸದಸ್ಯರು ಹಾಜರಿದ್ದರು.