ಮಡಿಕೇರಿ, ಡಿ. ೨: ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ವಿಶೇಷಚೇತನರಿಗೆ ಸಮರ್ಪಕ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಡಿಕೇರಿ ತಾಲೂಕು ಪಂಚಾಯತ್, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ಸಂಯುಕ್ತ ಆಶ್ರಯದಲ್ಲಿ ನಗರದ ತಾ.ಪಂ.ಕಚೇರಿ ಹತ್ತಿರದ ಸಮಾಜ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ‘ವಿಶೇಷಚೇತನರ ಪುನರ್ವಸತಿ ಸಂಪನ್ಮೂಲ ಕೇಂದ್ರ’ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಕಚೇರಿಗಳಿಗೆ ವಿಶೇಷಚೇತನರು ಆಗಮಿಸಿದ ಸಂದರ್ಭದಲ್ಲಿ ವೀಲ್ ಚೇರ್ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ಮತ್ತಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಶಿಶುವಿನಲ್ಲಿಯೇ ಮಗುವಿಗೆ ಸರಿಯಾದ ಚಿಕಿತ್ಸೆ ನೀಡಿದರೆ ವಿಕಲತೆ ಹೋಗಲಾಡಿಸಬಹುದು. ಆ ನಿಟ್ಟಿನಲ್ಲಿ ಮಕ್ಕಳ ಚಟುವಟಿಕೆ ಗಮನಿಸಬೇಕು. ವೈಜ್ಞಾನಿಕವಾಗಿ ಪುನರ್ವಸತಿ ಕಲ್ಪಿಸಿದರೆ ಇತರರಂತೆ ಬದುಕು ನಡೆಸಬಹುದು. ಆ ನಿಟ್ಟಿನಲ್ಲಿ ವಿಶೇಷಚೇತನರು ಯಾವುದೇ ಕಾರಣಕ್ಕೂ ಎದೆಗುಂದದೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

ಸರ್ಕಾರದಿಂದ ವಿಕಲಚೇತನರಿಗಾಗಿ ಹಲವು ಕಾರ್ಯಕ್ರಮಗಳಿದ್ದು, ಅವುಗಳನ್ನು ಬಳಸಿಕೊಳ್ಳಬೇಕು. ವಿಕಲಚೇತನ ಮಕ್ಕಳಿಗೆ ಸರಿಯಾದ ಶಿಕ್ಷಣ, ಉದ್ಯೋಗ ದೊರೆಯಬೇಕು. ಪುನರ್ವಸತಿ ಕೇಂದ್ರದ ಸೌಲಭ್ಯ ಬಳಸಿಕೊಳ್ಳಬೇಕು. ಇಲ್ಲಿ ಮಕ್ಕಳಿಗಾಗಿ ಉದ್ಯಾನವನ ಕಲ್ಪಿಸಿ, ಆಟದ ಚಟುವಟಿಕೆಗೆ ಅವಕಾಶ ಮಾಡಲಾಗುವುದು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಪ್ರತೀ ಗ್ರಾ.ಪಂ.ವ್ಯಾಪ್ತಿಯ ವಿಶೇಷಚೇತನರನ್ನು ವಾರಕ್ಕೊಮ್ಮೆಯಾದರೂ ಪುನರ್ವಸತಿ ಸಂಪನ್ಮೂಲ ಕೇಂದ್ರಕ್ಕೆ ಭೇಟಿ ನೀಡಲು ಅವಕಾಶ ಮಾಡಲಾಗುವುದು. ಇದರಿಂದ ಲವಲವಿಕೆ ಮತ್ತು ಕ್ರೀಯಾಶೀಲತೆಗೆ ಒತ್ತು ನೀಡಿದಂತಾಗುತ್ತದೆ ಎಂದು ಡಾ.ಮಂಥರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಸವಿತಾ ಮಾತನಾಡಿ ವಿಶೇಷಚೇತನರಿಗಾಗಿ ಪುನರ್ವಸತಿ ಸಂಪನ್ಮೂಲ ಕೇಂದ್ರವನ್ನು ಆರಂಭಿಸಲಾಗಿದೆ. ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಸಹ ಕೈಜೋಡಿಸಿವೆ. ಸುಸ್ಥಿರ ಅಭಿವೃದ್ಧಿಯ ಗುರಿಯಲ್ಲಿ ವಿಕಲಚೇತನರು ಸೇರಿದಂತೆ ಎಲ್ಲರನ್ನು ಒಳಗೊಂಡAತೆ ಅಭಿವೃದ್ಧಿಯನ್ನು ಕಾಣಬಹುದು. ಆ ನಿಟ್ಟಿನಲ್ಲಿ ಪರಿಪೂರ್ಣವಾಗಿ ವಿಶೇಷಚೇತನರಿಗೆ ಕಾರ್ಯಕ್ರಮಗಳು ತಲುಪಬೇಕು ಎಂದರು.

ತಾ.ಪಂ.ಇಒ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಮಾತನಾಡಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಹಕಾರದಲ್ಲಿ ವಿಶೇಷಚೇತನರಿಗೆ ನೇರವಾಗಿ ಸೌಲಭ್ಯ ಕಲ್ಪಿಸುವಲ್ಲಿ ಪ್ರಯತ್ನಿಸಲಾಗಿದೆ ಎಂದರು.

ಹಿರಿಯ ನಾಗರಿಕರ ಸಬಲೀಕರಣ ಹಾಗೂ ವಿಕಲಚೇತನರ ಅಧಿಕಾರಿ ವಿಮಲ ಮಾತನಾಡಿ, ವಿಶೇಷಚೇತನರಿಗೆ ಸರ್ಕಾರದಿಂದ ಸಾಧನೆ ಸಲಕರಣೆಗಳ ವಿತರಣೆ, ಬಸ್ ಪಾಸ್, ರೈಲ್ವೆ ಪಾಸ್ ಯೋಜನೆ, ಗುರುತಿನ ಚೀಟಿ, ವಿಶೇಷ ಚೇತನರೊಂದಿಗೆ ಸಾಮಾನ್ಯ ವ್ಯಕ್ತಿ ವಿವಾಹ, ವಿದ್ಯಾರ್ಥಿ ವೇತನ, ಆಧಾರ ಯೋಜನೆ, ವಿಮಾ ಯೋಜನೆ, ವೈದ್ಯಕೀಯ ಪರಿಹಾರ ನಿಧಿ, ಶುಲ್ಕ ಮರುಪಾವತಿ ಯೋಜನೆ, ಲ್ಯಾಪ್‌ಟಾಪ್ ವಿತರಣೆ, ಶಿಶು ಪಾಲನಾ ಭತ್ಯೆ, ಯಂತ್ರ ಚಾಲಿತ ತ್ರಿಚಕ್ರ ವಾಹನ ಯೋಜನೆ, ಸಾಧನೆ ಪ್ರತಿಭೆ, ಗ್ರಾಮೀಣ ಪುನರ್ ವಸತಿ ಯೋಜನೆ, ಅಂಗವಿಕಲರ ಮಕ್ಕಳ ಶಿಶು ಕೇಂದ್ರಿತ ಶೈಕ್ಷಣಿಕ ಯೋಜನೆ ಹೀಗೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸರ್ಕಾರಿ ರಜಾ ದಿನ ಹೊರತುಪಡಿಸಿ ಉಳಿದಂತೆ ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆವರೆಗೆ ವಿಶೇಷಚೇತನರ ಸಂಪನ್ಮೂಲ ಪುನರ್ವಸತಿ ಕೇಂದ್ರ ತೆರೆದಿರುತ್ತದೆ ಎಂದು ಮಾಹಿತಿ ಒದಗಿಸಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಕಾರ್ಯದರ್ಶಿ ಅಂಕಚಾರಿ ಅವರು ಆರೋಗ್ಯ ಸೇವೆ, ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ, ವಿಕಲಚೇತನರಿಗೆ ಸಾಧನ ಸಲಕರಣೆಗಳ ಬಗ್ಗೆ ಮಾಹಿತಿ, ವಿಶೇಷಚೇತನರಿಗೆ ಕೌಶಲ್ಯ ತರಬೇತಿ ಆಯೋಜಿಸುವುದು ಹೀಗೆ ಹಲವು ಕಾರ್ಯಕ್ರಮಗಳನ್ನು ಪುನರ್ವಸತಿ ಕೇಂದ್ರದಲ್ಲಿ ನಡೆಸಲಾಗುತ್ತದೆ.

ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಸವರಾಜು, ಜಿಲ್ಲಾ ವಿಶೇಷಚೇತನರ ಸಂಘದ ಅಧ್ಯಕ್ಷÀ ಜೆ.ಎ.ಮಹೇಶ್ವರ, ಪ್ರಮುಖರಾದ ಗಂಗಾಧರ, ವಿಕಲಚೇತನರ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.