ಕುಶಾಲನಗರ, ಡಿ. ೧: ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಚಲಿಸುತ್ತಿದ್ದ ಕಾರಲ್ಲೇ (ಕೆಎ೧೧ ಪಿ೧೩೭೯) ಸಿರಿಂಜು ಮೂಲಕ ಕ್ರಿಮಿನಾಶಕ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಕುಶಾಲನಗರ ಸಮೀಪದ ಆನೆಕಾಡು ಹೆದ್ದಾರಿಯಲ್ಲಿ ನಡೆದಿದೆ.

ಶುಕ್ರವಾರ ಮಧ್ಯಾಹ್ನ ವೇಳೆ ಈ ಘಟನೆ ಸಂಭವಿಸಿದ್ದು ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆಯುರ್ವೇದ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಸತೀಶ್ (೪೫) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಡಾ. ಸತೀಶ್ ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ನಿವಾಸಿಯಾಗಿದ್ದು ಕಳೆದ ಎರಡು ವರ್ಷಗಳಿಂದ ಪಿರಿಯಾಪಟ್ಟಣ ಸರಕಾರಿ ಆಸ್ಪತ್ರೆ ಮತ್ತು ಗ್ರಾಮಾಂತರ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಡ್ಯದಿAದ ಪಿರಿಯಾಪಟ್ಟಣಕ್ಕೆ ಪ್ರಯಾಣ ಮಾಡುವ ಮೂಲಕ ಆಸ್ಪತ್ರೆಗೆ ಬರುತ್ತಿದ್ದರು ಎನ್ನಲಾಗಿದೆ. ಶುಕ್ರವಾರ ಬೆಳಿಗ್ಗೆ ೧೦ ಗಂಟೆಗೆ ಆಸ್ಪತ್ರೆಗೆ ಕರ್ತವ್ಯಕ್ಕೆ ಬಂದ ವೈದ್ಯ ಡಾ. ಸತೀಶ್, ಆಸ್ಪತ್ರೆಯಿಂದ ಹೊರ ಹೋಗಿರುವುದಾಗಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ದಿನೇಶ್ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗಳಿಗೆ ವೇತನ ನೀಡುವ ಸಂಬAಧ ಡಾ. ಸತೀಶ್ ಅವರನ್ನು ವಿಚಾರಿಸಿದ ಸಂದರ್ಭ ಆಸ್ಪತ್ರೆಯಲ್ಲಿ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಆನೆಕಾಡು ಬಳಿ ಕಾರು ರಸ್ತೆ ಬದಿಯಲ್ಲಿ ನಿಂತಿದ್ದು ಕಾರಿನ ಕೆಳಭಾಗ ಶುಂಠಿಗೆ ಬಳಸುವ ಕ್ರಿಮಿನಾಶಕ ಡಬ್ಬ ಕಂಡು ಬಂದಿದೆ. ಸೀಟ್ ಬಳಿ ಕ್ರಿಮಿನಾಶಕ ತುಂಬಿದ ಸಿರಿಂಜು ಕಂಡುಬAದಿದ್ದು ಅರ್ಧ ಔಷಧಿಯನ್ನು ತನ್ನ ಕೈಗೆ ಚುಚ್ಚಿಕೊಂಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕಾರಿನ ಚಾಲಕ ಸೀಟಿನಲ್ಲಿ ಅಡ್ಡ ಬಿದ್ದಿದ್ದ ದೇಹವನ್ನು ದಾರಿಯಲ್ಲಿ ತೆರಳುವ ಪ್ರಯಾಣಿಕರು ಪರಿಶೀಲಿಸಿದ ಸಂದರ್ಭ ವ್ಯಕ್ತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಮಾಡಿಕೊಂಡ ವೈದ್ಯರ ಪತ್ನಿ ಮಂಡ್ಯದಲ್ಲಿ ಆಯುರ್ವೇದಿಕ್ ವೈದ್ಯರಾಗಿದ್ದು ಅವರು ಕೂಡ ಗುತ್ತಿಗೆ ಆಧಾರದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರುಗಳು ಮಂಡ್ಯದ ಶಿವಳ್ಳಿ ಬಳಿ ಕ್ಲಿನಿಕ್ ಒಂದನ್ನು ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಸ್ಥಳಕ್ಕೆ ಕುಶಾಲನಗರ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ, ವೃತ್ತನಿರೀಕ್ಷಕ ರಾಜೇಶ್ ಕೋಟ್ಯಾನ್, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎಂ.ಸಿ. ಶ್ರೀಧರ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಮಡಿಕೇರಿಯಿಂದ ಫೋರೆನ್ಸಿಕ್ ಲ್ಯಾಬ್ ಅಧಿಕಾರಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಕುಶಾಲನಗರದಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ದೇಹವನ್ನು ಹಸ್ತಾಂತರಿಸಲಾಯಿತು.

ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. - ಚಂದ್ರಮೋಹನ್