ಗೋಣಿಕೊಪ್ಪಲು, ಡಿ. ೧: ಸರಕಾರದ ಯೋಜನೆಗಳು ಅರ್ಹರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದ್ದು, ಕೆಲವರು ಜನರ ಕೆಲಸಗಳಿಗೆ ಸ್ಪಂದಿಸದ ಕುರಿತು ದೂರುಗಳು ಬಂದಿವೆ. ಅಧಿಕಾರಿಗಳು ಕಾರ್ಯವೈಖರಿ ಬದಲಾವಣೆ ಮಾಡಿಕೊಳ್ಳದಿದ್ದಲ್ಲಿ ಶಿಸ್ತು ಕ್ರಮ ಕಟ್ಟಿಟ್ಟ ಬುತ್ತಿ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಖಡಕ್ ಎಚ್ಚರಿಕೆ ನೀಡಿದರು.
ಪೊನ್ನಂಪೇಟೆ ಸಾಮರ್ಥ್ಯ ಸೌಧದಲ್ಲಿ ಆಯೋಜನೆಗೊಂಡಿದ್ದ ಅಧಿಕಾರಿಗಳ ತ್ರೆöÊಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಸರ್ಕಾರದ ಯೋಜನೆಯಿಂದ ಯಾರು ಕೂಡ ವಂಚಿತರಾಗಬಾರದು, ಕಚೇರಿಗೆ ಆಗಮಿಸಿದ ವೇಳೆ ಅಗತ್ಯ ಕೆಲಸಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು, ಕೆಲವು ಅಧಿಕಾರಿಗಳು ತಮ್ಮ ಕಾರ್ಯವೈಖರಿ ಬದಲಾವಣೆ ಮಾಡಿಕೊಳ್ಳದಿದ್ದಲ್ಲಿ. ಸರ್ಕಾರದ ಯೋಜನೆಗಳು ಪ್ರತಿ ನಾಗರಿಕರಿಗೆ ತಲುಪಿಸುವ ಕೆಲಸ ಅಧಿಕಾರಿಗಳಿಂದ ನಡೆಯಬೇಕು. ಕೇವಲ ನೆಪ ಹೇಳಿಕೊಂಡು ಜನರ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಜರುಗಿಸ ಲಾಗುತ್ತದೆ ಎಂದು ಎಚ್ಚರಿಸಿದರು.
ಶಿಕ್ಷಕರು ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡದೇ ಸಂಘದ ಹೆಸರಿನಲ್ಲಿ ಸುತ್ತಾಡುತ್ತಿರುವುದು ಗಮನಕ್ಕೆ ಬಂದಿದೆ. ಮೊದಲು ಮಕ್ಕಳಿಗೆ ಪಾಠ ಮಾಡುವುದು ನಿಮ್ಮ ಜವಾಬ್ದಾರಿ ನಂತರ ಸಂಘ ಸಂಸ್ಥೆಯ ಕೆಲಸ ಎಂದು ಬಿಇಒ ಪ್ರಕಾಶ್ಗೆ ನಿರ್ದೇಶನ ನೀಡಿದರು.
ಅಂತಹ ಘಟನೆಗಳು ನಡೆಯುತ್ತಿ ದ್ದರೆ, ಮೊದಲು ನಿಲ್ಲಿಸಬೇಕು,
ಶಾಲಾ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದು ಎಂದರು.
ವಿದ್ಯುತ್ ಕಡಿತಕ್ಕೆ ಆಕ್ಷೇಪ
ಸೆಸ್ಕ್ ಇಲಾಖೆಯ ಸಿಬ್ಬಂದಿಗಳು ಗಿರಿಜನರ ವಿದ್ಯುತ್ ಬಿಲ್ ಬಾಕಿ ಉಳಿದಿದೆ ಎಂದು ವಿದ್ಯುತ್ ನಿಲುಗಡೆ ಮಾಡಿರುವುದು ಸರಿಯಲ್ಲ. ಕೂಡಲೇ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿರಿಜನರ ಹಾಡಿಗೆ ವಿದ್ಯುತ್ ಸೌಲಭ್ಯ ನೀಡಬೇಕು, ವಿದ್ಯುತ್ ಬಿಲ್ ಹಣವನ್ನು ಹಂತ ಹಂತವಾಗಿ ಕಟ್ಟಲು ವ್ಯವಸ್ಥೆ ಮಾಡಬೇಕು, ದೊಡ್ಡವರ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಲು ತೆರಳಿದರೆ ಅವರ ಭಯ ನಿಮಗಿದೆ. ಬಡವರಾದರೆ ನಿಮಗೆ ಕನಿಷ್ಟ ಅನುಕಂಪ ಇಲ್ಲದೆ ವಿದ್ಯುತ್ ಕಡಿತಗೊಳಿಸುವ ಕ್ರಮ ಸರಿಯಲ್ಲ ಎಂದು ಸೆಸ್ಕ್
(ಮೊದಲ ಪುಟದಿಂದ) ಎಇಇ ಸುರೇಶ್ ಹಾಗೂ ಜಿಲ್ಲಾ ಸೆಸ್ಕ್ ಇಇ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಉತ್ತರಿಸಿದ ಸೆಸ್ಕ್ ಅಧಿಕಾರಿಗಳು ಇಲಾಖೆಯ ವತಿಯಿಂದ ವಿದ್ಯುತ್ ಬಿಲ್ ಪಡೆಯಲು ಕಠಿಣ ಅದೇಶ ಬಂದಿದೆ. ಅದಕ್ಕಾಗಿ ಬಾಕಿ ಉಳಿಸಿಕೊಂಡಿರುವ ಮನೆಗಳ ವಿದ್ಯುತ್ ಪೂರೈಕೆ ನಿಲುಗಡೆ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.
ಅಂಗನವಾಡಿ ಕಟ್ಟಡಕ್ಕೆ ಖಾಲಿ ಜಾಗ ಗುರುತಿಸಿಕೊಡಬೇಕು, ಸರ್ವೆ ಇಲಾಖೆಯಲ್ಲಿನ ಕೆಲಸಗಳಿಗೆ ಚುರುಕು ನೀಡಬೇಕು ಕೇವಲ ಸಿಬ್ಬಂದಿ ಕೊರತೆ ನೆಪ ಹೇಳುತ್ತ ಸಮಯ ಕಳೆಯದಂತೆ ಸೂಚಿಸಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸರ್ವೆಯರ್ ಸಮಸ್ಯೆ ಬಗೆಹರಿಸಲು, ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಿಗೆ ತರಬೇತಿ ನೀಡುವ ಮೂಲಕ ಸರ್ವೆ ಕಾರ್ಯ ಮಾಡಿಸಬಹುದು, ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆ ಎಂದು ಶಾಸಕ ಪೊನ್ನಣ್ಣನವರಿಗೆ ಮಾಹಿತಿ ಒದಗಿಸಿದರು.
ಸಭೆಯಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ, ಐಟಿಡಿಬಿ, ಪಶುವೈದ್ಯ, ಆಹಾರ, ಸೇರಿದಂತೆ ಇನ್ನಿತರ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡು ಅಗತ್ಯ ಮಾಹಿತಿ ಒದಗಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಕೆ.ಸಿ. ಅಪ್ಪಣ್ಣ, ಡಿವೈಎಸ್ಪಿ ಮೋಹನ್ ಕುಮಾರ್, ಉಪವಿಭಾಗಧಿಕಾರಿಗಳು, ಯತೀಶ್ ಉಲ್ಲಾಳ್, ಸೇರಿದಂತೆ ಅಧಿಕಾರಿಗಳು ವೇದಿಕೆಯಲ್ಲಿದ್ದರು.
ಚಿತ್ರ ವರದಿ - ಹೆಚ್.ಕೆ.ಜಗದೀಶ್