ಸಿದ್ದಾಪುರ, ಡಿ. ೧: ಎಸ್‌ಕೆಎಸ್‌ಎಸ್‌ಎಫ್ ಸಂಘಟನೆಯ ಸದಸ್ಯತ್ವ ಅಭಿಯಾನಕ್ಕೆ ನೆಲ್ಲಿಹುದಿಕೇರಿ ದಾರುಸ್ಸಲಾಂ ಮದರಸ ಸಭಾಂಗಣದಲ್ಲಿ ಮಸೀದಿಯ ಖತೀಬ್ ಆಸಿಫ್ ಹುದವಿ ಚಾಲನೆ ನೀಡಿದರು. ಬಳಿಕ ಮಾತನಾಡಿ, ಸಂಘಟನೆಯು ಕಳೆದ ೩೫ ವರ್ಷಗಳಿಂದ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಶಿಕ್ಷಣ, ಆರೋಗ್ಯ, ಸಂಕಷ್ಟದಲ್ಲಿರುವವರಿಗೆ ನೆರವು ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತಾ ಬರುತ್ತಿದ್ದು, ಶಾಂತಿ ಸಹ ಬಾಳ್ವೆಯ ಸಂದೇಶದೊAದಿಗೆ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಸಂಘಟನೆ ಮುಂದಾಗಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್‌ಕೆಎಸ್‌ಎಸ್‌ಎಫ್ ಸಂಘಟನೆಯ ನೆಲ್ಲಿಹುದಿಕೇರಿ ವಲಯ ಅಧ್ಯಕ್ಷ ಸಮೀರ್ ಮಾತನಾಡಿ, ನಮ್ಮ ಸಂಘಟನೆಯು ಜಾತಿ ಮತ ಭೇದವಿಲ್ಲದೆ ಕಾವೇರಿ ನದಿ ನೀರಿನ ಪ್ರವಾಹ, ಪ್ರಕೃತಿ ವಿಕೋಪ, ಕೋವಿಡ್ ಸೇರಿದಂತೆ ಹಲವು ಸಂದರ್ಭಗಳಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗುವುದರ ಮೂಲಕ ಸೇವಾ ಮನೋಭಾವದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಎರಡು ವರ್ಷಕ್ಕೊಮ್ಮೆ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು ನೂರಾರು ಮಂದಿ ಸದಸ್ಯತ್ವ ಹೊಂದಿದ್ದಾರೆ ಎಂದರು.

ಈ ಸಂದರ್ಭ ನೆಲ್ಲಿಹುದಿಕೇರಿ ದಾರುಸ್ಸಲಾಂ ಮದರಸ ಮುಖ್ಯ ಶಿಕ್ಷಕ ಬಶೀರ್ ಹಸನಿ, ಶಿಕ್ಷಕರುಗಳಾದ ಮುಹಮ್ಮದಲಿ ಮೌಲವಿ, ಅಹಮ್ಮದ್ ಫೈಝಿ, ಝೈನುದ್ದೀನ್ ಫೈಝಿ, ಯೂಸುಫ್ ಬಾಖವಿ ಜಮ್ಮಶೀರ್, ಅಸೀಮ್ ಮತ್ತು ಇತರರಿದ್ದರು.