ಮಡಿಕೇರಿ, ಡಿ. ೧: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನೆಬ್ಬೂರು ಗೌಡ ಸಂಘ ಬಲಮುರಿ ಇವರ ಸಂಯುಕ್ತ ಆಶ್ರಯದಲ್ಲಿ ಜಾನಪದ ಸಿರಿ ಕಾರ್ಯಕ್ರಮ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ನೆಬ್ಬೂರು ಗೌಡ ಸಂಘದ ಅಧ್ಯಕ್ಷ ಕೊಟ್ಟಕೇರಿಯನ ಬಿ. ಲೋಕನಾಥ ಅವರು ಪರೆಗೆ ಭತ್ತ ತುಂಬಿಸುವ ಮೂಲಕ ಚಾಲನೆ ನೀಡಿದರು.

ವಕೀಲರಾದ ಕೊಟ್ಟಕೇರಿಯನ ದಯಾನಂದ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ನೆಬ್ಬೂರು ಗೌಡ ಸಂಘ ನಾಲ್ಕು ತಲೆಮಾರಿನಿಂದ ನಡೆದುಕೊಂಡು ಬಂದಿದ್ದು ಕೇವಲ ಮೂರು ಕುಟುಂಬಗಳು ಮಾತ್ರ ಸೇರಿ ಕಟ್ಟಿದ ಸಂಘವಾಗಿದೆ. ಯಾವುದೇ ಕಟ್ಟಡವಿಲ್ಲ, ಕಚೇರಿ ಇಲ್ಲದೆ ವರ್ಷಕ್ಕೊಮ್ಮೆ ಗ್ರಾಮೀಣ ಕ್ರೀಡಾಕೂಟ ನಡೆಸಿಕೊಂಡು ಹಬ್ಬ ಹರಿದಿನಗಳನ್ನು ಒಂದಾಗಿ ಸೇರಿ ಆಚರಿಸಿಕೊಂಡು ಬರುತ್ತಿದ್ದೇವೆ. ಹಾಗೆಯೇ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಅವರು ಮಾತನಾಡಿ, ಜಾನಪದ ಸಿರಿ ಸಂಪತ್ತು ಉಳಿಯ ಬೇಕಾದರೆ ಹಳ್ಳಿಗಳಲ್ಲಿ ಇಂತಹ ಸಂಘ-ಸAಸ್ಥೆಗಳಿರಬೇಕು. ಜಾನಪದ ಸೊಗಡು ಚಿಗುರಬೇಕಾದರೆ ಮಕ್ಕಳಿಗೆ ಇಂತಹ ಗ್ರಾಮೀಣ ಕ್ರೀಡಾಕೂಟ ಜಾನಪದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಂತಹ ಕೆಲಸವನ್ನ ಇಂದು ನೆಬ್ಬೂರು ಗೌಡ ಸಂಘ ಅರ್ಥಪೂರ್ಣವಾಗಿ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿಂದಿನ ಕಾಲದಲ್ಲಿ ಜಾನಪದ ಬದುಕು ತುಂಬಾ ಚೆನ್ನಾಗಿತ್ತು. ಜಾನಪದ ಕಲೆ ಸಂಸ್ಕೃತಿ ಹಿರಿಯರಿಂದ ಮಕ್ಕಳಿಗೆ ಪರಿಚಯವಾಗಿ ಪೀಳಿಗೆ ಯಿಂದ ಪೀಳಿಗೆಗೆ ಮುಂದುವರಿಯ ಬೇಕು ಎಂದರು.

ಕರ್ನಾಟಕ ಸುವರ್ಣ ಸಂಭ್ರಮಾಚರಣೆಯನ್ನು ಗ್ರಾಮಸಿರಿ ಕಾರ್ಯಕ್ರಮದ ಮೂಲಕ ವರ್ಷ ಪೂರ್ತಿ ಹಳ್ಳಿ ಹಳ್ಳಿಗಳಲ್ಲಿ ನಡೆಸ ಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅವರು, ಕೇವಲ ಮೂರು ಕುಟುಂಬಗಳು ಸೇರಿಕೊಂಡು ಯಾವುದೇ ಕಟ್ಟಡದ ಸಹಕಾರವಿಲ್ಲದೆ ಕುಟುಂಬದ ಬಾಣೆಯೊಂದರಲ್ಲಿ ಪ್ರತಿ ವರ್ಷ ಗ್ರಾಮೀಣ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಸೊಗಡನ್ನು ಪೋಷಿಸುತ್ತಿರುವ ನೆಬ್ಬೂರು ಸಂಘ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಸೇರಿಕೊಂಡು ನಡೆಸಿದ ಕಾರ್ಯಕ್ರಮ ಜಾನಪದ ಹಾಗೂ ಕನ್ನಡದ ಕಂಪು ಒಂದಾಗಿ ಬೆರೆತು ಅರ್ಥಪೂರ್ಣ ಯಶಸ್ವಿ ಯೊಂದಿಗೆ ಜಾನಪದ ಸಿರಿ ಕಾರ್ಯ ಕ್ರಮ ಹೊರಸೂಸಿದೆ ಎಂದರು.

ಪೊನ್ನಚನ ರೋಹಿತ್ ತಂಡದಿAದ ಸ್ವಾಗತ, ಗೀತೆ ಪಾರೆಮಜ್ಲು ದೇವಮ್ಮ ಶಿರಕಜೆ ಹೇಮಾವತಿ ಅವರಿಂದ ಸೋಬಾನೆ ಪದ, ಕೊಟ್ಟಕೇರಿಯನ ಲೀಲಾ ದಯಾನಂದ ಅವರಿಂದ ಕವನ ವಾಚನ, ಪುಟಾಣಿ ಯಶಿಕಾಳಿಂದ ದೇಶದ ರಾಜ್ಯ ರಾಜಧಾನಿಗಳ ಹೆಸರು ಹೇಳುವಿಕೆ, ಪೊನ್ನಚನ ದಿನೇಶ್ ಅವರಿಂದ ಕನ್ನಡ ಗೀತ ಗಾಯನ, ಕೊಟ್ಟಕೇರಿಯನ ದೀಕ್ಷಾ ಅವರಿಂದ ಜಾನಪದ ನೃತ್ಯ, ಪೊನ್ನಚನ ಸೇಜಲ್ ಅವರಿಂದ ಜಾನಪದ ನೃತ್ಯ, ನಂಗಾರು ಪುಣ್ಯ ಬಸವರಾಜ್ ಅವರಿಂದ ಕಂಸಾಳೆ ನೃತ್ಯ, ಪೊನ್ನಚನ ಅಂಜನಾ ತಂಡ ದಿಂದ ಜಾನಪದ ನೃತ್ಯ ವೈವಿಧ್ಯಗಳು ಜನಮನ ಸೂರೆಗೊಂಡವು.

ಹಿರಿಯ ಕ್ರೀಡಾಪಟುಗಳಾದ ಪೊನ್ನಚನ ಮಾದಪ್ಪನವರು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಮಕ್ಕಳಿಗೆ ಕಾಳು ಹೆಕ್ಕುವುದು, ಮಹಿಳೆಯರಿಗೆ ನೀರು ಚೆಂಬಿನ ಓಟ, ಕಾಯಿಗೆ ಕಲ್ಲು ಹೊಡೆಯುವುದು, ಬಕೇಟಿಗೆ ಚೆಂಡು ಹಾಕುವುದು, ಬಟ್ಟೆ ಕಣ್ಣಿಗೆ ಕಟ್ಟಿ ಮಡಿಕೆ ಹೊಡೆಯುವುದು ಹೀಗೆ ಹತ್ತು ಹಲವು ಗ್ರಾಮೀಣ ಕ್ರೀಡಾಕೂಟಗಳನ್ನು ಹಮ್ಮಿಕೊಂಡಿದ್ದು ವಿಜೇತರಿಗೆ ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಲಾಯಿತು.

ಸಾಹಿತ್ಯ ಶಿಕ್ಷಣ ಕ್ರೀಡೆ ಸೇನೆ ವೈದ್ಯಕೀಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರುಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.

ಸಾಹಿತ್ಯ ಕ್ಷೇತ್ರದಲ್ಲಿ ಕಟ್ರತನ ಲಲಿತ ಅಯ್ಯಣ್ಣ, ಶಿಕ್ಷಣ ಕ್ಷೇತ್ರದಲ್ಲಿ ಕೊಟ್ಟಕೇರಿಯನ ಶ್ರೀಜಾ ದಯಾನಂದ, ಪೊನ್ನಚನ ತ್ರಿನೇಶ್ ಅಪ್ಪಯ್ಯ, ಕೊಟ್ಟಕೇರಿಯನ ಚಂದ್ರಿಕ ಧರ್ಮೇಂದ್ರ, ಆರೋಗ್ಯ ಕ್ಷೇತ್ರದಲ್ಲಿ ಕೊಟ್ಟಕೇರಿಯನ ಸುಲೋಚನಾ ಬಾಲಕೃಷ್ಣ, ಶಿಕ್ಷಣ ಕ್ಷೇತ್ರದಲ್ಲಿ ಕಟ್ರತನ ಪ್ರೇಮ ಮಧುರಾಜ್, ಕಟ್ರತನ ಕುಸುಮ ಸುಲೋಚನ, ಕ್ರೀಡಾ ಕ್ಷೇತ್ರದಲ್ಲಿ ಪೊನ್ನಚನ ಬೃಂದಾ ದಿನೇಶ್, ಸೇನಾ ಕ್ಷೇತ್ರದಲ್ಲಿ ಪೊನ್ನಚನ ಪ್ರಶಾಂತ್ ಪೂಣಚ್ಚ, ಪೊನ್ನಚನ ಹಿತನ್ ಕರುಂಬಯ್ಯ ಇವರು ಸನ್ಮಾನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಬಲಮುರಿ ದೇವನೂರು ಗೌಡ ಒಕ್ಕೂಟದ ಅಧ್ಯಕ್ಷರಾದ ಪೊನ್ನಚನ ಜಯ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಮಿತಿ ಸದಸ್ಯರಾದ ರಮ್ಯಾ ಕೆ.ಜಿ. ತಾಲೂಕು ಕಾರ್ಯದರ್ಶಿಗಳಾದ ಪುದಿಯನೆರವನ ರಿಶಿತ್ ಮಾದಯ್ಯ, ಬಾಳೆಯಡ ದಿವ್ಯ ಮಂದಪ್ಪ, ಸಂಘಟನಾ ಕಾರ್ಯದರ್ಶಿ ಗಳಾದ ಚೊಕ್ಕಡಿ ಪ್ರೇಮ ರಾಘವಯ್ಯ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ನೆರೆ ಕರೆಯುವರು ಸೇರಿದ್ದರು.

ಪೊನ್ನಚನ ಡೈನ ಸರ್ವರನ್ನು ಸ್ವಾಗತಿಸಿ, ಕೊಟ್ಟಕೇರಿಯನ ಧರ್ಮೇಂದ್ರ ಕಾರ್ಯಕ್ರಮ ನಿರೂಪಿಸಿ, ಕಟ್ರತನ ರೋಹಿಣಿ ವಂದಿಸಿದರು.