ಮಡಿಕೇರಿ, ಡಿ. ೧: ನದಿಯಲ್ಲಿ ಮುಳುಗಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಪೆರಾಜೆ ಸಮೀಪದ ಅರಂಬೂರಿನಲ್ಲಿ ನಡೆದಿದೆ. ಮೂಲತಃ ೨ನೇ ಮೊಣ್ಣಂಗೇರಿಯ ಪ್ರಸ್ತುತ ಕಾಟಕೇರಿಯಲ್ಲಿ ನೆಲೆಸಿದ್ದ ಎಂ.ಎಸ್. ವೆಂಕಟರಮಣ ಮೂಲ್ಯ ಮೃತ ದುರ್ದೈವಿ.

ನ. ೩೦ ರಂದು ಗಾರೆ ಕೆಲಸಕ್ಕೆಂದು ಬೆಟ್ಟತ್ತೂರಿಗೆ ತೆರಳಿದ ವೆಂಕಟರಮಣ ಮಧ್ಯಾಹ್ನ ಹೊತ್ತಿಗೆ ಅನಾರೋಗ್ಯವಿದೆ ಎಂದು ಮಾಲೀಕರಿಗೆ ಹೇಳಿದ್ದು, ನಂತರ ಮಾಲೀಕರೇ ಅವರನ್ನು ಮಡಿಕೇರಿಗೆ ವಾಹನದಲ್ಲಿ ಕರೆತಂದು ಬಿಟ್ಟು ಖರ್ಚಿಗೆ ರೂ. ೫೦೦ ನೀಡಿದ್ದಾರೆ. ರಾತ್ರಿ ಮನೆಗೆ ಬಾರದ ಹಿನ್ನೆಲೆ ಮನೆಯವರು ಹುಡುಕಾಟ ನಡೆಸಿದ್ದಾರೆ.

ಇಂದು ಪಯಸ್ವಿನಿ ನದಿ ಬಳಿ ಅಯ್ಯಪ್ಪ ಮಾಲಾಧಾರಿಗಳು ಪೂಜೆಗೆಂದು ತೆರಳಿದ್ದ ಸಂದರ್ಭ ವೆಂಕಟರಮಣ ಅವರ ಪರಿಚಿತರೊಬ್ಬರು ಕಂಡು ಮಾತನಾಡಿ, ಊಟ ಮಾಡಲು ಬನ್ನಿ ಎಂದು ಕರೆದು ಸ್ವಲ್ಪ ದೂರ ತೆರಳಿ ಹಿಂದೆ ತಿರುಗಿ ನೋಡಿದ ಸಂದರ್ಭ ವೆಂಕಟರಮಣ ನೀರಿನಲ್ಲಿ ಮುಳುಗಿರುವುದು ಕಂಡು ಬಂದಿದೆ. ತಕ್ಷಣ ಸ್ಥಳೀಯರ ನೆರವು ಪಡೆದು ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಹಾಯದೊಂದಿಗೆ ನೀರಿನಲ್ಲಿ ಮುಳುಗಿದ್ದ ಮೃತದೇಹವನ್ನು ಮೇಲೆತ್ತಲಾಯಿತು.