ಗೋಣಿಕೊಪ್ಪಲು, ನ. ೨೯: ಮುಂಬರುವ ಲೋಕಸಭಾ ಚುನಾವಣೆಯು ನಮ್ಮ ಮುಂದೆ ಇರುವ ಸವಾಲಿನ ಚುನಾವಣೆ ಯಾಗಿದೆ. ದೇಶದ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಪಕ್ಷದ ಕಾರ್ಯಕರ್ತರು ಶ್ರಮ ವಹಿಸಬೇಕು ಎಂದು ಮೈಸೂರು-ಕೊಡಗು ಲೋಕಸಭಾ ಸಂಸದ ಪ್ರತಾಪ್ ಸಿಂಹ ಕರೆ ನೀಡಿದರು.
ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯ ಸಭಾಂಗಣದಲ್ಲಿ ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನವಾಗಿ ವಿವಿಧ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾದವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪ್ರತಾಪ್ಸಿಂಹ, ಸಹಕಾರ ಸಂಘಗಳಲ್ಲಿ ನಡೆದ ಚುನಾವಣೆಯಲ್ಲಿ ಜಿಲ್ಲೆಯ ೩೦ ಸಹಕಾರ ಸಂಘಗಳಲ್ಲಿ ಬಹುತೇಕ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿ ನಿರ್ದೇಶಕರಾಗಿದ್ದಾರೆ.
ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತರ ಪಡೆ ಗಟ್ಟಿಯಾಗಿದೆ. ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿರುವುದನ್ನು ಕಹಿ ಘಟನೆ ಎಂದು ಮರೆಯೋಣ. ಸೋಲಿಗೆ ಕಾರಣಗಳು ಈಗಾಗಲೇ ಕಾರ್ಯಕರ್ತರಿಗೆ ಮನವರಿಕೆಯಾಗಿದೆ. ಸೂರ್ಯನಿಗೆ ಒಮ್ಮೆ ಗ್ರಹಣ ಬರುವುದು ಸಹಜ. ಅದೇ ರೀತಿಯಲ್ಲಿ ನಾವು ಒಂದು ಬಾರಿ ಸೋಲನ್ನು ಕಂಡಿದ್ದೇವೆ. ಮುಂದೆ ಸೋಲನ್ನು ಕಾಣುವ ಅವಕಾಶವೇ ಎದುರಾಗಬಾರದು. ಕಳೆದ ಬಾರಿ ನಡೆದ ಸೋಲಿನ ಸೇಡನ್ನು ಮುಂದಿನ ಲೋಕಸಭೆಯಲ್ಲಿ ಅತ್ಯಧಿಕ ಮತಗಳನ್ನು ನೀಡುವ ಮೂಲಕ ಕೊಡಗು ಜಿಲ್ಲೆಯಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಸಾಭೀತು ಮಾಡಬೇಕು. ಆ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ತಮ್ಮ ಜವಾಬ್ದಾರಿಯನ್ನು ಚಾಚೂತಪ್ಪದೆ ಪಾಲಿಸಬೇಕು.
ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಪೊಲೀಸ್ ಮೊಕದ್ದಮೆಯನ್ನು ದಾಖಲಿಸುವ ವಿಚಾರಗಳು ಈಗಾಗಲೇ ತಿಳಿದು ಬಂದಿದೆ. ಪಕ್ಷದ ನಾಯಕರು ಕಾರ್ಯಕರ್ತರೊಂದಿಗೆ ಸದಾ ಒಡನಾಟದಲ್ಲಿದ್ದಾರೆ. ಯಾವುದಕ್ಕೂ ದೃತಿಗೆಡುವ ಅವಶ್ಯಕತೆ ಎದುರಾಗಬಾರದು.
ಸಮಸ್ಯೆ ಎದುರಾದಾಗ ಯಾವುದೇ ಸಂದರ್ಭ ದಲ್ಲಿ ಪಕ್ಷದ ಜವಾಬ್ದಾರಿಯುತ ನಾಯಕರಿಗೆ ಸಂಪರ್ಕಿಸಬೇಕು. ಅಗತ್ಯವಿದ್ದಲ್ಲಿ ಹೋರಾಟಕ್ಕೆ ಮುಂದಾಗಬೇಕು. ಈಗಾಗಲೇ ಕೊಡಗು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ.
ಯಾರೂ ಕೂಡ ಭಯಪಡುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ಕೇವಲ ಸುಳ್ಳಿನ ಸರಮಾಲೆಯನ್ನೇ ಜನರ ಮುಂದಿಟ್ಟು ಗೆಲುವು ಸಾಧಿಸಿದೆ ಎಂದು ಟೀಕಿಸಿದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ವಿಧಾನ ಸಭೆಯಲ್ಲಿ ಸೋಲನ್ನು ಕಂಡಿದ್ದೇವೆ. ಇದೇ ವಿಚಾರವನ್ನು ಮನಸ್ಸಿನಲ್ಲಿಟ್ಟು ಕೊಂಡು ನೋವು ಅನುಭವಿಸುವುದು ಸರಿಯಲ್ಲ. ಮುಂದೆ ಬರುವ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡೋಣ.
ಕೇಂದ್ರ ಸರ್ಕಾರವು ಜನತೆಗೆ ನೀಡಿರುವ ಯೋಜನೆಗಳ ಬಗ್ಗೆ ಮನೆ ಮನೆಗೆ ತೆರಳಿ ಮನವರಿಕೆ ಮಾಡಿಕೊಡಬೇಕು. ಸರ್ಕಾರ ಬಂದು ಆರು ತಿಂಗಳು ಕಳೆದರೂ ಕೊಡಗಿನ ಅಭಿವೃದ್ಧಿಗೆ ಯಾವುದೇ ಅನುದಾನ ಮಂಜೂರಾಗಿಲ್ಲ. ಈಗಾಗಲೇ ಕ್ಷೇತ್ರದಲ್ಲಿ ಶಾಸಕರು ನಡೆಸುತ್ತಿರುವ ಭೂಮಿ ಪೂಜಾ ಕಾರ್ಯಕ್ರಮವು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭ ಮಂಜೂರಾಗಿರುವ ಅನುದಾನವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್, ಪ್ರತಿ ಚುನಾವಣೆಯಲ್ಲಿಯೂ ಬಿಜೆಪಿ ಪಕ್ಷ ಪ್ರತಿ ಬೂತ್ನಲ್ಲಿಯೂ ಹೆಚ್ಚಿನ ಮತ ನೀಡುವ ಕಾರ್ಯ ಮುಂದುವರೆಸಿದೆ. ಮುಂದಿನ ಚುನಾವಣೆಯಲ್ಲಿ ಇದನ್ನು ಮತ್ತಷ್ಟು ಹೆಚ್ಚು ಮಾಡಲಾಗುತ್ತಿದೆ. ಕಾರ್ಯಕರ್ತರು ಸಕ್ರಿಯವಾಗಿದ್ದು ಪಕ್ಷದ ಚಟುವಟಿಕೆಯಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು. ಕಾರ್ಯಕ್ರಮದ ಅಂಗವಾಗಿ ಪ್ರತಿಷ್ಠಿತ ಪೊನ್ನಂಪೇಟೆಯ ಎಪಿಸಿಎಂಎಸ್ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ತೀವ್ರ ಪೈಪೋಟಿ ನಡುವೆ ಬಿಜೆಪಿಯ ೧೩ ಮಂದಿ ನಿರ್ದೇಶಕರು ಆಯ್ಕೆ ಆಗಿರುವುದನ್ನು ಪರಿಗಣಿಸಿ ಎಲ್ಲಾ ನಿರ್ದೇಶಕರು ಗಳನ್ನು ಅತಿಥಿಗಳು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರುಗಳಾದ ಮಾಚಿಮಾಡ ರವೀಂದ್ರ, ಗುಮ್ಮಟ್ಟೀರ ಕಿಲನ್ ಗಣಪತಿ, ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಯ ಬಿಜೆಪಿ ಪ್ರಮುಖ್, ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.