ಶನಿವಾರಸಂತೆ, ನ. ೨೯: ಟಿ.ಟಿ. (ಧನುರ್ವಾಯು) ಒಂದು ಬ್ಯಾಕ್ಟೀರಿಯವಾಗಿದ್ದು ಹರಡುವ ಕಾಯಿಲೆಯಾಗಿದೆ. ಇದು ಮಣ್ಣಲ್ಲಿ ಎಲ್ಲಾ ಕಡೆಯೂ ಇದ್ದು ಹರಡುತ್ತದೆ ಎಂದು ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಿ.ಪಿ. ಅಶೋಕ್ ಕುಮಾರ್ ಹೇಳಿದರು. ಪಟ್ಟಣದ ರೋಟರಿ ಸಂಸ್ಥೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಹಭಾಗಿತ್ವದಲ್ಲಿ ನಡೆದ ೭ನೇ ವರ್ಷದ ಉಚಿತ ಟಿ.ಟಿ. ಲಸಿಕಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೋಟರಿ ಸಂಸ್ಥೆ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳಲ್ಲಿ ಧನುರ್ವಾಯು ರೋಗ ನಿವಾರಣೆಗಾಗಿ ಸಾರ್ವಜನಿಕರಿಗೆ ಆಯೋಜಿಸುವ ಉಚಿತ ಟಿ.ಟಿ. ಲಸಿಕಾ ಶಿಬಿರವೂ ಒಂದಾಗಿದೆ. ಮನುಷ್ಯರಿಗೆ ಗಾಯವಾದಾಗ ಅಥವಾ ಹೆರಿಗೆಯಾದಾಗ ಧನುರ್ವಾಯು ಕಾಯಿಲೆ ಬರುತ್ತದೆ. ಕಾಯಿಲೆ ಬಂದಾಗ ಬಾಯಿ ಕಟ್ಟಿಕೊಳ್ಳುವುದು, ಕತ್ತು ಗಟ್ಟಿಯಾಗಿ ನಿಲ್ಲುವುದು, ಉಸಿರಾಟದ ಸಮಸ್ಯೆಯಾಗಿ ಜೀವ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ರೋಗ ನಿರೋಧನೆಗೆ ಕನಿಷ್ಟ ೫ ವರ್ಷಕ್ಕೊಮ್ಮೆಯಾದರೂ ಪ್ರತಿಯೊಬ್ಬರು ಟಿ.ಟಿ. ಲಸಿಕೆ ಹಾಕಿಸಿಕೊಳ್ಳಬೇಕು. ಗರ್ಭಿಣಿಯರು ೨ ಲಸಿಕೆಗಳನ್ನು ೧ ತಿಂಗಳ ಅಂತರದಲ್ಲಿ ಪಡೆದುಕೊಳ್ಳಬೇಕು. ಟಿ.ಟಿ. ಲಸಿಕೆ ಪಡೆಯುವುದರಿಂದ ಮಾತ್ರ ಧನುರ್ವಾಯು ರೋಗ ನಿಯಂತ್ರಣ ಸಾಧ್ಯ ಎಂದು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆ ಅಧ್ಯಕ್ಷ ಎ.ಹೆಚ್. ಚಂದ್ರಕಾAತ್ ಹಾಗೂ ಮುಖ್ಯ ಅತಿಥಿ ಜಿಲ್ಲಾ ರಾಜ್ಯಪಾಲ ಮೇಜರ್ ಡೋನರ್ ಹೆಚ್.ಆರ್. ಕೇಶವ್ ಮಾತನಾಡಿದರು. ಉಪ ರಾಜ್ಯಪಾಲ ರೊಟೇರಿಯನ್ ಲಿಖಿತ್, ಸಂಸ್ಥಾಪಕ ಅಧ್ಯಕ್ಷ ಹೆಚ್.ವಿ. ದಿವಾಕರ, ವಲಯ ಸೇನಾನಿ ಹೆಚ್.ಎಂ. ದಿವಾಕರ್, ಕಾರ್ಯದರ್ಶಿ ಸೋಮಶೇಖರ್, ರೋಟರಿ ನಿರ್ದೇಶಕರು, ಹಿರಿಯ ಆರೋಗ್ಯ ಸಹಾಯಕಿ ಸರಸ್ವತಿ, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.