ಮಡಿಕೇರಿ, ನ. ೩೦: ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ೨೩ನೇಯ ಮಹಾಸಭೆ ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ (ನಿ) ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಬಿ.ಎ. ಕಾರ್ಯಪ್ಪ ಅವರು, ಮಾಜಿ ಸೈನಿಕರು ವಿಭಜನೆಗೊಳ್ಳದಂತೆ ಒಗ್ಗಟ್ಟಿನಿಂದ ಇರುವ ಮೂಲಕ ಸೌಲಭ್ಯಗಳನ್ನು ಪಡೆದು ಕೊಳ್ಳಬಹುದಾಗಿದೆ. ಕುಂದುಕೊರತೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಸರಕಾರದ ಗಮನಸೆಳೆಯಲಾಗುವುದು, ಈ ನಿಟ್ಟಿನಲ್ಲಿ ಸಂಘ ಈಗಾಗಲೇ ಕಾರ್ಯೋನ್ಮುಖವಾಗಿದೆ ಎಂದರು. ಮಾಜಿ ಸೈನಿಕರು, ಇ.ಸಿ.ಹೆಚ್.ಎಸ್. ಹಾಗೂ ಕ್ಯಾಂಟೀನ್ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಲೂ ಅವರು ಕರೆ ನೀಡಿದರು.

ಸಭೆಯಲ್ಲಿ ಸಂಘದ ಕುಶಾಲನಗರದ ಅಧ್ಯಕ್ಷರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ಮೊಣ್ಣಪ್ಪ ಹಾಗೂ ಕೊರೊನಾ ಸಂದರ್ಭದಲ್ಲಿ ಮೃತಪಟ್ಟ ಶನಿವಾರಸಂತೆ ಸಂಘದ ಅಧ್ಯಕ್ಷರಾದ ಧರ್ಮಪ್ಪ ಅವರ ಪರವಾಗಿ ಪತ್ನಿ ಶಾರದ ಹಾಗೂ ಸಂಘಕ್ಕೆ ಕಡಿಮೆ ಬಾಡಿಗೆಯಲ್ಲಿ ಕಚೇರಿ ಪ್ರಾರಂಭಿಸಲು ಸಹಕಾರ ನೀಡಿರುವ ಮಡಿಕೇರಿ ಪಿ.ಎಲ್.ಡಿ. ಬ್ಯಾಂಕ್‌ನ ಅಧ್ಯಕ್ಷ ಎ.ಕೆ. ಮನುಮುತ್ತಪ್ಪ ಅವರನ್ನು ಸನ್ಮಾನಿಸಲಾಯಿತು.

ಸಂಘದ ಕಾರ್ಯದರ್ಶಿ ನಿವೃತ್ತ ಮೇಜರ್ ಓಡಿಯಂಡ ಎಸ್. ಚಿಂಗಪ್ಪ ಅವರು, ಕಳೆದ ಸಾಲಿನ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ಪದಾಧಿಕಾರಿಗಳಾದ, ಉಪಾಧ್ಯಕ್ಷರಾದ ಕರ್ನಲ್ ಚಿಣ್ಣಪ್ಪ, ಏರ್ ಕಮಾಂಡರ್ ದೇವಯ್ಯ, ಲೆ.ಕ. ನಾಚಪ್ಪ, ಲೆ.ಕ. ಗಣಪತಿ ಸೇರಿದಂತೆ ಜಿಲ್ಲೆಯ ಇನ್ನಿತರ ೯ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಸಂಘದ ಸದಸ್ಯರು ಪಾಲ್ಗೊಂಡಿದ್ದರು.