ಶನಿವಾರಸಂತೆ, ನ. ೩೦: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನಿಲುವಾಗಿಲು-ಬೆಸೂರು ಗ್ರಾಮಗಳ ಶ್ರೀಬಾಲ ತ್ರಿಪುರ ಸುಂದರಿ ಅಮ್ಮನವರ ಕ್ಷೇತ್ರದಲ್ಲಿ ದೇವಾಲಯ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಅಮ್ಮನವರ ೧೧ನೇ ವರ್ಷದ ವಾರ್ಷಿಕ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ದೇವಾಲಯದಲ್ಲಿ ಬೆಳಿಗ್ಗೆ ನಿರ್ಮಲ ದರ್ಶನ, ಮಂಗಳಾರತಿ, ಗಣ ಹೋಮ ಇತ್ಯಾದಿ ಪೂಜಾ ಕೈಂಕರ್ಯಗಳು ನೆರವೇರಿದವು. ನಿಲುವಾಗಿಲು-ಬೆಸೂರು ಗ್ರಾಮಗಳ, ಕೊಡ್ಲಿಪೇಟೆ, ಯಸಳೂರು, ಚಂಗಡಹಳ್ಳಿ, ಶನಿವಾರಸಂತೆ, ಇತರ ಊರುಗಳಿಂದ ಸಾವಿರಾರು ಮಂದಿ ಭಕ್ತರು ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಅನ್ನಸಂತರ್ಪಣೆ ನಡೆಯಿತು.

ಗಾಯಕ ಕುನಿಗನಹಳ್ಳಿ ಸುರೇಂದ್ರ ಮತ್ತು ರಾಜ್ಯ ಕಲಾಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಕೊಣನೂರು ಶ್ರೀನಿವಾಸ್ ಮತ್ತು ಸಹ ಕಲಾವಿದರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಿತು.

ಶ್ರೀ ಕ್ಷೇತ್ರದಲ್ಲಿ ರಾತ್ರಿ ದೀಪಾರಾಧನೆ, ಮಹಾ ಮಂಗಳಾರತಿ ನಡೆದು ಪ್ರಸಾದ ವಿನಿಯೋಗವಾಯಿತು. ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.