ವಿದ್ಯುತ್ ಸ್ಪರ್ಶಿಸಿ ತಂದೆ-ಮಗ ಸಾವು
ಚಿಕ್ಕೋಡಿ, ನ. ೨೮: ವಿದ್ಯುತ್ ಪ್ರವಹಿಸಿ ತಂದೆ-ಮಗ ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದಲ್ಲಿ ನಡೆದಿದೆ. ಬೋರವೆಲ್ ವಾಟರ್ ವಾಲ್ವ್ ತಿರುಗಿಸುವ ವೇಳೆ ವಿದ್ಯುತ್ ಸ್ಪರ್ಶಿಸಿದ್ದರಿಂದ ಅವಘಡ ನಡೆದಿದೆ. ಮಲ್ಲಿಕಾರ್ಜುನ ಸದಾಶಿವ ಪೂಜಾರಿ (೩೨), ಪ್ರೀತಮ್ ಮಲ್ಲಿಕಾರ್ಜುನ ಪೂಜಾರಿ (೭) ಮೃತರು. ತಂದೆಗೆ ವಿದ್ಯುತ್ ತಗುಲಿದ್ದನ್ನು ನೋಡಿ ಮಗ ರಕ್ಷಣೆಗೆ ಬಂದಾಗ ಆತನಿಗೂ ವಿದ್ಯುತ್ ಪ್ರವಹಿಸಿದೆ, ಇದರಿಂದ ಸ್ಥಳದಲ್ಲಿ ತಂದೆ-ಮಗ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಾಕಪ್ಡೆತ್ ಪ್ರಕರಣ: ಪಿಎಸ್ಐ ಸೇರಿ ಮೂವರ ಅಮಾನತು
ಕೋಲಾರ, ನ. ೨೮: ಲಾಕಪ್ಡೆತ್ ಪ್ರಕರಣವೊಂದರಲ್ಲಿ ಪಿಎಸ್ಐ ಸೇರಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದ್ದು, ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆಂದು ಕರೆತಂದಿದ್ದ ಆರೋಪಿಯೊಬ್ಬರು ಅಕ್ಟೋಬರ್ ೧ ರಂದು ಸಾವನ್ನಪ್ಪಿದ್ದರು. ಪ್ರಕರಣದಲ್ಲಿ ಠಾಣೆಯ ಪಿಎಸ್ಐ ಪ್ರದೀಪ್ ಸಿಂಗ್ ಹಾಗೂ ಪೊಲೀಸ್ ಪೇದೆ ಮಂಜುನಾಥ್, ಮಹಾಂತೇಶ್ ಪೂಜಾರಿ ಎಂಬವರನ್ನು ಅಮಾನತು ಮಾಡಲಾಗಿದೆ. ಕಳ್ಳತನ ಪ್ರಕರಣದಲ್ಲಿ ಆಂಧ್ರಪ್ರದೇಶದ ಮದನಪಲ್ಲಿ ಮೂಲದ ಮುನಿರಾಜು ಮತ್ತು ಬಾಲಾಜಿ ಎಂಬ ಯುವಕರನ್ನು ವಿಚಾರಣೆಗೆಂದು ಸೆಪ್ಟೆಂಬರ್ ೧೭ರಂದು ಠಾಣೆಗೆ ಕರೆತಂದಿದ್ದರು. ಅವರನ್ನು ಹಿರಿಯ ಅಧಿಕಾರಿಗಳ ಗಮನಕ್ಕೂ ತಾರದೆ, ಬೇರೆ-ಬೇರೆ ಸ್ಥಳಗಳಲ್ಲಿ ಇರಿಸಿ, ೧೫ ದಿನಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಅಕ್ಟೋಬರ್ ೧ ರಂದು ಪೊಲೀಸ್ ಸುಪರ್ದಿಯಲ್ಲೇ ಮುನಿರಾಜು ಸಾವನ್ನಪ್ಪಿದ್ದ. ಬಳಿಕ, ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿತ್ತು. ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆ ಅರೋಪಿಗಳನ್ನ ವಿಚಾರಣೆ ಮಾಡಿ, ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪದ ಮೇಲೆ ಮೂವರನ್ನು ಅಮಾನತು ಮಾಡಿ ಎಫ್ಐಆರ್ ದಾಖಲಾಗಿದೆ.
ನಿಗಮ-ಮಂಡಳಿ: ಪಟ್ಟಿ ಅಂತಿಮಗೊAಡ ಬಳಿಕ ಹೈಕಮಾಂಡ್ಗೆ ರವಾನೆ; ಡಿ.ಕೆ.ಶಿ.
ಬೆಂಗಳೂರು, ನ. ೨೮: ಆಡಳಿತಾರೂಢ ಕಾಂಗ್ರೆಸ್ ಶಾಸಕರು ಮತ್ತು ಕಾರ್ಯಕರ್ತರನ್ನು ರಾಜ್ಯ ಸರ್ಕಾರದ ಅಧೀನದ ವಿವಿಧ ನಿಗಮ - ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ ಮತ್ತು ಈ ಪಟ್ಟಿಯನ್ನು ಅಂತಿಮಗೊಳಿಸಿದ ನಂತರ ಅನುಮೋದನೆಗಾಗಿ ಪಕ್ಷದ ಹೈಕಮಾಂಡ್ಗೆ ಕಳುಹಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ಹೇಳಿದ್ದಾರೆ. ಕರ್ನಾಟಕದ ಉಸ್ತುವಾರಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಪಕ್ಷದ ರಾಜ್ಯದ ನಾಯಕತ್ವದೊಂದಿಗೆ ಈ ಕಸರತ್ತಿನ ಕುರಿತು ಚರ್ಚಿಸಲು ಇಂದು ನಗರಕ್ಕೆ ಬಂದಿದ್ದಾರೆ. ಕಳೆದ ವಾರವೂ ಇಲ್ಲಿ ಈ ಕುರಿತು ಚರ್ಚೆ ನಡೆಸಿದ್ದರು. ಇದು ನಮ್ಮ ನಿತ್ಯದ ಕೆಲಸ, ಇದು ಪಕ್ಷದ ಕೆಲಸ. ಅವರು (ಸುರ್ಜೇವಾಲಾ) ಬ್ಯುಸಿಯಾಗಿದ್ದರು. ನಾವು ಎರಡು ಮೂರು ಸುತ್ತಿನ ಸಭೆ ನಡೆಸಿದ್ದೇವೆ. ಇಂದು ಕೂಡ ನಾವು ಸಭೆ ನಡೆಸಿ ಅಂತಿಮಗೊAಡ ಪಟ್ಟಿಯನ್ನು ದೆಹಲಿಗೆ ಕಳಿಸಬೇಕು. ಅದು ಅನುಮೋದನೆಗೊಂಡ ನಂತರ ನಾವು ತಿಳಿಸುತ್ತೇವೆ ಎಂದು ಶಿವಕುಮಾರ್ ಅವರು ಸುರ್ಜೇವಾಲಾ ಅವರೊಂದಿಗಿನ ಭೇಟಿ ಬಗೆಗಿನ ಪ್ರಶ್ನೆಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಮಕ್ಕಳ ಮಾರಾಟ ತಮಿಳುನಾಡು ಮೂಲದ ನಾಲ್ವರ ಬಂಧನ
ಬೆAಗಳೂರು, ನ. ೨೮: ಹೆತ್ತವರ ಮಡಿಲಿನಲ್ಲಿ ಬೆಚ್ಚಗೆ ಮಲಗಿರುವ ಹಸುಗೂಸುಗಳನ್ನು ಕದ್ದು ಮಾರಾಟ ಮಾಡುವ ಜಾಲವೊಂದನ್ನು ಸಿಸಿಬಿ ಅಧಿಕಾರಿಗಳು ಭೇದಿಸಿದ್ದಾರೆ. ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ನವಜಾತ ಶಿಶು ಮಾರಾಟ ಮಾಡುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರ್.ಆರ್. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಶುಕ್ರವಾರ ಮಗು ಮಾರಾಟಕ್ಕೆ ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಸಂಘಟಿತ ಅಪರಾಧ ವಿಭಾಗದ ಅಧಿಕಾರಿಗಳು ಕಣ್ಣನ್ ರಾಮಸ್ವಾಮಿ, ಹೇಮಲತಾ, ಮುರುಗೇಶ್ವರಿ ಹಾಗೂ ಶರಣ್ಯ ಎಂಬವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನವಜಾತ ಶಿಶುವನ್ನು ಮಾರಾಟ ಮಾಡಲು ಯತ್ನಿಸಿದ ಮೂವರು ಮಹಿಳೆಯರು ಸೇರಿದಂತೆ ನಾಲ್ವರನ್ನು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಮಹಿಳೆಯೊಬ್ಬರಿಗೆ ಮಗುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಗ್ಯಾಂಗ್ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ. ಮಹಿಳೆಯೊಬ್ಬರು ಬಂದ ನಂತರ ಮಗುವನ್ನು ತಮಿಳುನಾಡಿನಿಂದ ಬೆಂಗಳೂರಿಗೆ ಕರೆತಂದಿದ್ದಾರೆ ಎಂದು ವರದಿಯಾಗಿದೆ ಮತ್ತು ಶುಕ್ರವಾರ ರಾತ್ರಿ ರಾಜರಾಜೇಶ್ವರಿ ದೇವಸ್ಥಾನದ ಬಳಿ ಬಂಧಿಸಲಾಗಿದೆ. ಮಗುವನ್ನು ಖರೀದಿಸಲು ಬಯಸಿದ್ದ ಮಹಿಳೆಯನ್ನು ಮಹಾಲಕ್ಷ್ಮಿ ಎಂದು ಗುರುತಿಸಲಾಗಿದ್ದು, ಬಂಧಿತ ನಾಲ್ವರಿಂದ ಆಕೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ದಂಧೆಯ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಇನ್ಸ್ಪೆಕ್ಟರ್ ನಯಾಜ್ ಅಹ್ಮದ್ ನೇತೃತ್ವದ ತಂಡವು ತಮಿಳುನಾಡು ನೋಂದಣಿಯೊAದಿಗೆ ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಅವರನ್ನು ಬಂಧಿಸಿದೆ. ನವಜಾತ ಶಿಶುಗಳನ್ನು ಮಾರಾಟ ಮಾಡಲು ಮಕ್ಕಳಿಲ್ಲದ ದಂಪತಿಗಳನ್ನು ಗುಂಪು ಟಾರ್ಗೆಟ್ ಮಾಡಲಾಗಿತ್ತು. ಇವರಿಂದ ಮೂರು ಮೊಬೈಲ್ ಫೋನ್ ಹಾಗೂ ಒಂದು ಕಾರು, ಒಟ್ಟು ರೂ. ೩.೧೫ ಲಕ್ಷ ವಶಪಡಿಸಿಕೊಳ್ಳಲಾಗಿದೆ. ಸಿಸಿಬಿ ಪೊಲೀಸರು ಐವರು ಆರೋಪಿಗಳ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, ೨೦೧೫ ರ ಅಡಿಯಲ್ಲಿ ಇತರ ಐಪಿಸಿ ಸೆಕ್ಷನ್ನೊಂದಿಗೆ ಪ್ರಕರಣವನ್ನು ದಾಖಲಿಸಲಾಗಿದೆ.