ಸೋಮವಾರಪೇಟೆ, ನ. ೨೮: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ತಾ. ೩೦ ರಂದು (ನಾಳೆ) ಡಯಾಲಿಸಿಸ್ ಕೇಂದ್ರದ ಸಿಬ್ಬಂದಿಗಳು ರಾಜ್ಯದಾದ್ಯಂತ ಅನಿರ್ದಿಷ್ಟಾವಧಿಯವರೆಗೆ ಮುಷ್ಕರ ಮಾಡಲಿದ್ದು, ಸೋಮವಾರಪೇಟೆ ಕೇಂದ್ರದ ಸಿಬ್ಬಂದಿಗಳು ಮುಷ್ಕರಕ್ಕೆ ಕೈ ಜೋಡಿಸುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಂಜೀವಿನಿ ಸಂಸ್ಥೆಯವರು ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆಗೆ ಗುತ್ತಿಗೆ ಪಡೆದಿದ್ದು, ಸಿಬ್ಬಂದಿಗಳಿಗೆ ಕಳೆದ ಎರಡು ವರ್ಷಗಳಿಂದ ಸರಿಯಾಗಿ ವೇತನ ನೀಡುತ್ತಿಲ್ಲ. ಇಎಸ್ಐ, ಪಿಎಫ್ ಮತ್ತು ಇತರ ಭತ್ಯೆಯೊಂದಿಗೆ ವೇತನವನ್ನು ಕಡಿತ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದು, ಬೇಡಿಕೆ ಈಡೇರುವವರೆಗೆ ಮುಷ್ಕರ ನಡೆಸುವುದಾಗಿ ತಿಳಿಸಿದ್ದಾರೆ.
ನೌಕರರ ಮುಷ್ಕರದ ನಿರ್ಧಾರದಿಂದಾಗಿ ಡಯಾಲಿಸಿಸ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ೫೦ಕ್ಕೂ ಅಧಿಕ ರೋಗಿಗಳಿಗೆ ಆತಂಕ ಎದುರಾಗಿದೆ.