ಗೋಣಿಕೊಪ್ಪಲು, ನ. ೨೫: ಪೊನ್ನಂಪೇಟೆಯ ಅರಣ್ಯ ಮಹಾ ವಿದ್ಯಾಲಯ ದಲ್ಲಿ ಸಿರಿಧಾನ್ಯ ಉತ್ಪನ್ನಗಳ ಮೌಲ್ಯವರ್ಧನೆ ಪ್ರಾತ್ಯಕ್ಷತೆಯನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನಲ್ಲಿ ಅಳವಡಿಸಿರುವ ರೊಟ್ಟಿ ತಯಾರಿಸುವ ಯಂತ್ರದ ಪ್ರಾತ್ಯಕ್ಷಿಕತೆ ಯನ್ನು ಹಾಗೂ ಸಿರಿಧಾನ್ಯಗಳಿಂದ ವಿವಿಧ ತಿನಿಸುಗಳನ್ನು ತಯಾರಿಸುವ ಕುರಿತು ತರಬೇತಿಯನ್ನು ತೆಲಂಗಾಣದ ವೀರಶೆಟ್ಟಿ ಬಿರಾದಾರ್ ಅವರು ತೋರಿಸಿಕೊಟ್ಟರು. ಅರಣ್ಯ ಮಹಾವಿದ್ಯಾಲಯದ ಪ್ರಬಾರ ಡೀನ್ ಡಾ. ರಾಮಕೃಷ್ಣ ಹೆಗಡೆ ಅವರು ಸಿರಿಧಾನ್ಯಗಳಿಂದ ತಯಾರಿಸಬಹುದಾದ ರೊಟ್ಟಿ ತಯಾರಿಕಾ ಯಂತ್ರ ಮತ್ತು ಸಿರಿಧಾನ್ಯಗಳ ಬೇಕರಿ ಘಟಕಕ್ಕೆ ಚಾಲನೆ ನೀಡಿದರು.
ಆಸಕ್ತಿಯುಳ್ಳ ಸಣ್ಣ ಉದ್ದಿಮೆದಾರರು ಈ ಘಟಕವನ್ನು ದಿನಗಳ ಆಧಾರದಲ್ಲಿ ಬಾಡಿಗೆ ಕಟ್ಟಿ ತಮ್ಮ ಪದಾರ್ಥಗಳನ್ನು ತಯಾರಿಸಬಹುದು ಎಂದು ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ. ಸಂಗಪ್ಪ ತಿಳಿಸಿದರು.
ಸಿರಿಧಾನ್ಯಗಳನ್ನ ಬೆಳೆಸಲು ಮತ್ತು ಬಳಸಲು ಕಾರ್ಯನಿರ್ವಹಿಸುತ್ತಿರುವ ಕನಕಪುರ ಆರ್ಗಾನಿಕ್ ಪ್ರೋಡ್ಯುಸರ್ ಕಂಪನಿಯ ನಿರ್ದೇಶಕ ರಾಮ್ ಸ್ವರೂಪ್ ಸಿರಿಧಾನ್ಯಗಳಿಂದ ತಯಾರಿಸಬಹುದಾದ ಪದಾರ್ಥಗಳು ಹಾಗೂ ಅದರ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಕೃಷಿ ವಿಸ್ತರಣಾ ಘಟಕದ ಮುಖ್ಯಸ್ಥ ಡಾ. ಕೆಂಚಾರೆಡ್ಡಿ, ಕೆ.ವಿ.ಕೆ. ಗೋಣಿಕೊಪ್ಪಲು ಮುಖ್ಯಸ್ಥ ಡಾ. ಪ್ರಭಾಕರ್, ಪ್ರಾಧ್ಯಾಪಕ ಡಾ. ಜಡೆಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ಲಕ್ಷಿö್ಮÃ ಬಳಗಾನೂರಮಠ, ಸಹಾಯಕ ಪ್ರಾಧ್ಯಾಪಕಿ ನಡೆಸಿಕೊಟ್ಟರು.
ಎಸ್.ಕೆ.ಡಿ.ಆರ್.ಡಿ.ಪಿ ಸಂಘದ ಮಹಿಳಾ ಸದಸ್ಯರುಗಳು ತರಬೇತಿಯನ್ನು ಪಡೆದರು. ಘಟಕದ ಹೆಚ್ಚಿನ ಮಾಹಿತಿಗಾಗಿ ಮತ್ತು ತರಬೇತಿಗಾಗಿ ಸುಜಯ್ ಆರ್.ಕೆ - ೯೮೪೫೯೬೮೩೭೨ ಇವರನ್ನು ಸಂಪರ್ಕಿಸಬಹುದು.