ಮಡಿಕೇರಿ, ನ.೨೪ : ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಸಂಯುಕ್ತ ಹೋರಾಟ-ಕರ್ನಾಟಕ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ತಾ. ೨೬ ರಿಂದ ೨೮ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯುವ ೭೨ ಗಂಟೆಗಳ ಮಹಾಧರಣಿಗೆ ಎಐಟಿಯುಸಿ ಕೊಡಗು ಜಿಲ್ಲಾ ಸಮಿತಿಯ ಬೆಂಬಲವಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಎಐಟಿಯುಸಿ ಸಂಘಟನೆಯ ಕೊಡಗು ಜಿಲ್ಲಾ ಸಮಿತಿಯ ನೂರಕ್ಕೂ ಅಧಿಕ ಸದಸ್ಯರು ಬೆಂಗಳೂರಿನಲ್ಲಿ ತಾ. ೨೭ ರಂದು ನಡೆಯುವ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳ ಸಾವಿರಾರು ಕಾರ್ಯಕರ್ತರು ಮಹಾಧರಣಿಯಲ್ಲಿ ಪಾಲ್ಗೊಂಡು ಸುಮಾರು ೨೬ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಿದ್ದಾರೆ ಎಂದು ಹೇಳಿದ್ದಾರೆ.