ಮಡಿಕೇರಿ, ನ. ೨೪: ಸೇವಾ ಖಾಯಮಾತಿಗೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ನಗರದ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಯಿತು.

ಕೊಡಗು ಸೇರಿದಂತೆ ರಾಜ್ಯಾದ್ಯಂತ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು ೧೪ ಸಾವಿರ ಅತಿಥಿ ಉಪನ್ಯಾಸಕರಿದ್ದಾರೆ. ಆದರೆ, ನಮ್ಮ ಆರ್ಥಿಕ, ಸಾಮಾಜಿಕ ಸ್ಥಿತಿ ಉನ್ನತೀಕರಣಕ್ಕೆ ಯಾವುದೇ ಕಾರ್ಯಕ್ರಮ ಸರಕಾರ ರೂಪಿಸಿಲ್ಲ. ಈ ಹಿನ್ನೆಲೆ ಅತಿಥಿ ಉಪನ್ಯಾಸಕರ ಸೇವೆ ಖಾಯಂಗೊಳಿಸಬೇಕು. ಸೇರಿದಂತೆ ಸೇವಾ ಭದ್ರತೆ ಒದಗಿಸಬೇಕು ಎಂದು ಪ್ರತಿಭಟನಾನಿರತರು ಸರಕಾರವನ್ನು ಆಗ್ರಹಿಸಿದರು. ಬಳಿಕ ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭ ಸಂಘದ ಜಿಲ್ಲಾಧ್ಯಕ್ಷ ಎಂ.ಎ. ಶ್ಯಾಂ ಪ್ರಸಾದ್, ಕಾರ್ಯದರ್ಶಿ ಡಾ. ಜಿ. ಮಾದಪ್ಪ, ಖಜಾಂಜಿ ಡಾ. ಮಧುಸೂದನ್, ಸಂಘಟನಾ ಕಾರ್ಯದರ್ಶಿ ಕೆ.ಟಿ. ಶಾಲಿನ, ಸದಸ್ಯರುಗಳಾದ ಶಮೀನ ತಾಜ್, ಡೀನಾ, ಸುಪ್ರಿಯಾ, ಶಾಂತಕುಮಾರ್, ಕಾವ್ಯ, ವಿದ್ಯಾ ಸೇರಿದಂತೆ ಇನ್ನಿತರರು ಹಾಜರಿದ್ದರು.