ಗೋಣಿಕೊಪ್ಪಲು, ನ. ೨೪: ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ನುರಿತ ತಜ್ಞವೈದ್ಯ ಡಾ. ಶುಶ್ರುತ್‌ಗೌಡ ನೇತೃತ್ವದಲ್ಲಿ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವೈದ್ಯಕೀಯ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರ ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ ಪ್ರದೇಶದ ಜನತೆಗೆ ಸಮೀಪದಲ್ಲಿಯೇ ಉತ್ತಮ ಆಸ್ಪತ್ರೆಯ ಸೇವೆ ಸದಾ ಲಭಿಸುತ್ತಿದೆ. ಆದರೆ ಗ್ರಾಮೀಣ ಭಾಗದ ಜನತೆಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಪಡೆಯಲು ದೂರದ ನಗರ ಪ್ರದೇಶಗಳಿಗೆ ತೆರಳಿ ಅಲ್ಲಿನ ಆಸ್ಪತ್ರೆಯ ಸೇವೆ. ಪಡೆಯಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ವಿವಿಧ ಭಾಗದಲ್ಲಿ ಬಡಜನತೆಗೆ ಉತ್ತಮ ರೀತಿಯ ವೈದ್ಯರ ತಂಡದಿAದ ಚಿಕಿತ್ಸೆ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಗ್ರಾಮೀಣ ಭಾಗದ ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತಾಗಬೇಕು ಎಂದರು.

ನುರಿತ ನರರೋಗ ತಜ್ಞ ಡಾ. ಶುಶ್ರುತಗೌಡ ಮಾತನಾಡಿ, ಈಗಾಗಲೇ ಸಂಸ್ಥೆಯ ವತಿಯಿಂದ ನೂರಾರು ಆರೋಗ್ಯ ಚಿಕಿತ್ಸಾ ಶಿಬಿರಗಳನ್ನು ನಡೆಸಲಾಗಿದೆ. ಗ್ರಾಮೀಣ ಭಾಗದ ಜನತೆಗೆ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸುವುದು ಸಂಸ್ಥೆಯ ಮೂಲ ಉದ್ದೇಶ. ಈಗಾಗಲೇ ೧೦ ಸಾವಿರಕ್ಕೂ ಅಧಿಕ ಗ್ರಾಮೀಣ ಜನತೆಗೆ ಸಂಸ್ಥೆಯ ವತಿಯಿಂದ ವೈದ್ಯಕೀಯ ಚಿಕಿತ್ಸೆ ನೀಡುವ ಮೂಲಕ ಕೆಲಸ ನಿರ್ವಹಿಸಿದ್ದೇವೆ. ಸಂಸ್ಥೆಯ ನುರಿಯ ತಜ್ಞ ವೈದ್ಯರು ಇಂತಹ ಸಮಾಜ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.

ತಜ್ಞ ವೈದ್ಯ ಡಾ. ಶಶಾಂಕ್ ಮಾತನಾಡಿ, ಸಂಸ್ಥೆ ವತಿಯಿಂದ ವಿಶೇಷವಾಗಿ ಆದಿವಾಸಿಗಳಲ್ಲಿ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸಲು ತಂಡ ಕೆಲಸ ನಿರ್ವಹಿಸುತ್ತಿದೆ. ತಿತಿಮತಿ ಭಾಗದ ೨೦೦ಕ್ಕೂ ಅಧಿಕ ಆದಿವಾಸಿಗಳು ಇಲ್ಲಿನ ವೈದ್ಯಕೀಯ ಚಿಕಿತ್ಸಾ ಶಿಬಿರದ ಪ್ರಯೋಜನ ಪಡೆದಿದ್ದಾರೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ಗ್ರಾಮೀಣ ಭಾಗಕ್ಕೆ ತೆರಳುವ ಮೂಲಕ ಗಿರಿಜನರಲ್ಲಿ ಜಾಗೃತಿ ಮೂಡಿಸಿ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪರಿಶಿಷ್ಟ ವರ್ಗಗಳ ತಾಲೂಕು ಕಲ್ಯಾಣ ಅಧಿಕಾರಿ ಎ.ಎಂ.ನವೀನ್ ಕುಮಾರ್, ಬಿ.ಕೆ. ಕೀರ್ತಿಕುಮಾರ್, ವೀರಾಜಪೇಟೆ ಪುರಸಭಾ ಸದಸ್ಯ ಎಂ.ಹೆಚ್. ಮತೀನ್, ಮುಖ್ಯ ಶಿಕ್ಷಕ ಸಿದ್ದಲಿಂಗ ಶೆಟ್ಟಿ, ಮೇಲ್ವೀಚಾರಕರಾದ ಜೆ.ಕೆ. ರಾಣಿ, ಸುಶೀಲ, ತಿತಿಮತಿ ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.