ಸಿದ್ದಾಪುರ, ನ. ೨೪: ಕರಡಿ ಗೋಡು ಗ್ರಾಮದಲ್ಲಿ ಮುಂದುವರೆದ ಕಾಡಾನೆಗಳ ಹಾವಳಿಯಿಂದಾಗಿ ಬೆಳೆಗಾರರು ಹಾಗೂ ಕೃಷಿಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕರಡಿಗೋಡು ಗ್ರಾಮದ ನಿವಾಸಿಯಾಗಿರುವ ಚಾರಿಮಂಡ ತಮ್ಮಯ್ಯ ಎಂಬವರ ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ದಾಂಧಲೆ ನಡೆಸಿ ತೋಟಕ್ಕೆ ನೀರು ಹಾಯಿಸುವ ವಿದ್ಯುತ್ ಮೀಟರ್‌ಗಳನ್ನು ಎಳೆದು ಹಾಕಿ ಹಾನಿಗೊಳಿಸಿದಲ್ಲದೆ ಪೈಪುಗಳನ್ನು ತುಳಿದು ಜಖಂಗೊಳಿಸಿದೆ. ಇದಲ್ಲದೆ ಫಸಲಿರುವ ೨೫ಕ್ಕೂ ಅಧಿಕ ಅಡಿಕೆ ಮರಗಳನ್ನು ಧ್ವಂಸಗೊಳಿಸಿವೆ ಎಂದು ತಮ್ಮಯ್ಯ ಮಾಹಿತಿ ನೀಡಿದರು. ಕಳೆದ ೫ ದಿನಗಳಿಂದ ೧೩ಕ್ಕೂ ಅಧಿಕ ಕಾಡಾನೆಗಳು ಕಾಫಿ ತೋಟದೊಳಗೆ ಬೀಡುಬಿಟ್ಟು ದಾಂಧಲೆ ನಡೆಸುತ್ತಾ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೀಗ ಕಾಫಿ ಹಣ್ಣಾಗಿದ್ದು, ಕಾಡಾನೆಗಳು ದಾಂಧಲೆ ನಡೆಸಿದ ಪರಿಣಾಮ ಕೈಯಿಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಕರಡಿಗೋಡು ಗ್ರಾಮದಲ್ಲಿ ನಿರಂತರವಾಗಿ ಕಾಡಾನೆಗಳ ಹಾವಳಿ ಇದ್ದು ಸಂಜೆ ಸಮಯದಲ್ಲಿ ಮನೆಯ ಅಂಗಳಕ್ಕೆ ಲಗ್ಗೆ ಇಡುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅರಣ್ಯ ಇಲಾಖಾಧಿಕಾರಿಗಳು ಕಾಡಾನೆ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಿದ್ದಾರೆ.