ಮಡಿಕೇರಿ, ತಾ. ೨೪: ಮಡಿಕೇರಿ ಹಿಂದೂ ಮಲಯಾಳಿ ಸಂಘದ ವತಿಯಿಂದ ಓಣಂ ಅಂಗವಾಗಿ ‘ಓಣಾಘೋಷಂ-ಓಣAಸಧ್ಯ' ಕಾರ್ಯಕ್ರಮ ತಾ. ೨೬ ರಂದು ನಡೆಯಲಿದೆ ಎಂದು ಓಣಂ ಆಚರಣಾ ಸಮಿತಿ ಅಧ್ಯಕ್ಷ ಟಿ.ಆರ್. ವಾಸುದೇವ್ ಮಾಹಿತಿ ನೀಡಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ ೯.೩೦ಕ್ಕೆ ಮಡಿಕೇರಿ ಗಾಂಧಿ ಮೈದಾನದಿಂದ ಕಾವೇರಿ ಹಾಲ್ ತನಕ ಮೆರವಣಿಗೆ ಸಾಗಲಿದೆ. ನಂತರ ಕಾವೇರಿ ಹಾಲ್ನಲ್ಲಿ ಪೂಕಳಂ ಸ್ಪರ್ಧೆ ನಡೆಯಲಿದ್ದು, ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ಮಡಿಕೇರಿ ಶಾಸಕ ಡಾ. ಮಂಥರ್ ಗೌಡ, ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್, ನಗರಸಭಾ ಮಾಜಿ ಸದಸ್ಯರುಗಳಾದ ಪಿ.ಟಿ. ಉಣ್ಣಿಕೃಷ್ಣ, ಕೆ.ಎಂ. ಗಣೇಶ್, ಉದ್ಯಮಿಗಳಾದ ಎನ್.ಕೆ. ಅಜಿತ್ ಕುಮಾರ್, ಮಾಜಿ ಸೈನಿಕ ಡಿ.ಹೆಚ್. ಗಣೇಶ್ ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ, ೧೦ ನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಇದೇ ಸಂದರ್ಭ ಸನ್ಮಾನಿಸಲಾಗುವುದು. ಮಧ್ಯಾಹ್ನ ೧ ಗಂಟೆಗೆ ಓಣಂ ಸಧ್ಯ ಬಳಿಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪೂಕಳಂ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಖಜಾಂಜಿ ಪಿ.ಟಿ. ಉತ್ತಮನ್, ಉಪಾಧ್ಯಕ್ಷ ಪಿ. ವಿಜಯ ಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ವಿ. ಧರ್ಮೇಂದ್ರ ಹಾಜರಿದ್ದರು.