ಸೋಮವಾರಪೇಟೆ, ನ. ೨೩: ಸಂವಿಧಾನದ ಆಶಯಗಳ ಅನುಷ್ಠಾನಕ್ಕೆ ಆಗ್ರಹಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನಾವಾದ) ಕೊಡಗು ಜಿಲ್ಲಾ ಸಮಿತಿ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಸಮಿತಿಯ ಜಿಲ್ಲಾ ಸಂಚಾಲಕ ಸಿ.ಸಿ. ಲೋಕೇಶ್ ನೇತೃತ್ವದಲ್ಲಿ ಇಲ್ಲಿನ ಜೇಸೀ ವೇದಿಕೆಯಲ್ಲಿ ಪ್ರತಿಭಟನೆ ನಡೆಸಿ, ನಂತರ ತಾಲೂಕು ಕಚೇರಿವರೆಗೆ ಮೆರವಣಿಗೆ ತೆರಳಲಾಯಿತು. ಮುಂದಿನ ಅಧಿವೇಶನದಲ್ಲಿ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ ಕಾಯ್ದೆಗೆ ತಿದ್ದುಪಡಿ ತರಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರು ಹಾಗೂ ನೀಡಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದರೊಂದಿಗೆ ಹೊರಮೂಲ ನೇಮಕಾತಿಯಲ್ಲಿ ಎಸ್.ಸಿ.-ಎಸ್.ಟಿ., ಒಬಿಸಿಗಳಿಗೆ ಮೀಸಲಾತಿ ಕಲ್ಪಿಸಿ ಆದೇಶ ಹೊರಡಿಸಬೇಕು. ದೌರ್ಜನ್ಯ ತಡೆಕಾಯ್ದೆ ೧೯೮೯ ರ ಅಡಿ ೨೦೧೮ರ ತಿದ್ದುಪಡಿ ಕಲಂ(೧೮)(ಎ) ಅನ್ನು ರಾಜ್ಯಾದ್ಯಂತ ಪೊಲೀಸ್ ಠಾಣೆಯಲ್ಲಿ ಅನುಷ್ಠಾನಗೊಳಿಸಬೇಕು. ಮಡಿಕೇರಿ ಜಿಲ್ಲಾ ಕೇಂದ್ರದಲ್ಲಿ ಸರ್ಕಾರದ ಅನುದಾನದಲ್ಲಿ ಅಂಬೇಡ್ಕರ್ ಪುತ್ಥಳಿ ಹಾಗೂ ಭವನ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಎಸ್.ಸಿ.-ಎಸ್.ಟಿಗಳಿಗೆ ಕೃಷಿ ಭೂಮಿ, ಉಚಿತ ಮನೆಗಳನ್ನು ನಿರ್ಮಿಸಿಕೊಡಬೇಕು. ಸ್ಮಶಾನ ಜಾಗದ ಒತ್ತುವರಿ ತೆರವು ಮಾಡಿಸಬೇಕು. ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವ ಜಾಗವನ್ನು ಸಕ್ರಮಗೊಳಿಸಬೇಕು. ಹೈಕೋರ್ಟ್, ಸುಪ್ರೀಂಕೋರ್ಟ್ ನ್ಯಾಯಾಧೀಶರ ಹುದ್ದೆಯ ನೇಮಕಾತಿಯಲ್ಲಿ ಎಸ್.ಸಿ.-ಎಸ್.ಟಿ, ಒಬಿಸಿಗಳಿಗೆ ಮೀಸಲಾತಿ ಕಲ್ಪಿಸಲು ಸಂವಿಧಾನ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನಾ ಸಂಚಾಲಕರಾದ ವಿಜಯಕುಮಾರ್, ಅವಿನಾಶ್, ಸೋಮವಾರಪೇಟೆ ತಾಲೂಕು ಸಂಚಾಲಕ ಶಿವಕುಮಾರ್, ಶನಿವಾರಸಂತೆ ಸಂಚಾಲಕ ರೋಹಿತ್, ಪದಾಧಿಕಾರಿಗಳಾದ ಕವಿತ, ಕೋಮಲ, ದಯಾಕರ, ಉಮೇಶ್ ಮತ್ತಿತರರು ಇದ್ದರು.