ವೀರಾಜಪೇಟೆ, ನ. ೨೨: ಹಳೆಯ ಮನೆ ದುರಸ್ತಿ ಕಾಮಗಾರಿ ನಡೆಸುತ್ತಿದ್ದ ಸಂದರ್ಭ ವಿಶೇಷಚೇತನ ಅಣ್ಣನ ಮೇಲೆ ತಮ್ಮನೋರ್ವ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವೀರಾಜಪೇಟೆ ಹೊರ ವಲಯದ ಕಾಕೋಟುಪರಂಬು ನಿವಾಸಿ ದಯಾನಂದ ಕೆ.ಜಿ.(೬೭) ಎಂಬುವವರೇ ಹಲ್ಲೆಗೆ ಒಳಗಾದ ವ್ಯಕ್ತಿಯಾಗಿದ್ದು, ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಯಾನಂದ ಅವರಿಗೆ ಸೇರಿದ ಹಳೆಯ ಮನೆ ಮಳೆಗಾಲದಲ್ಲಿ ಸಂಪೂರ್ಣ ಸೋರುತ್ತಿದ್ದು, ಇದೀಗ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಮನೆ ದುರಸ್ತಿ ಮಾಡಲು ದಯಾನಂದ ಕುಟುಂಬ ಸದಸ್ಯರು ಮುಂದಾಗಿದ್ದರು.

ಕೆಲಸ ಮಾಡುವ ಸಂದರ್ಭ ದಯಾನಂದ ಅವರ ಜೊತೆಗೆ ಸಹೋದರ ಸತೀಶ್ ಹಾಗೂ ಪತ್ನಿ ಕಮಾಲಾಕ್ಷಿ ಕ್ಷÄಲ್ಲಕ ವಿಚಾರಕ್ಕೆ ಜಗಳವಾಡಿ ದೊಣ್ಣೆಯಿಂದ ಥಳಿಸಿದ್ದಾರೆ. ಇದರಿಂದ ವಿಶೇಷಚೇತನರಾದ ದಯಾನಂದ ಅವರ ಕಾಲು ಹಾಗೂ ಕೈಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಹಲ್ಲೆಯನ್ನು ತಡೆಯಲು ಮುಂದಾದ ದಯಾನಂದ ಅವರ ಪತ್ನಿ ಲಲಿತ ಅವರ ಮುಖ ಭಾಗಕ್ಕೆ ಗಂಭೀರವಾಗಿ ಗಾಯವಾಗಿದೆ, ಗಾಯಾಳುಗಳಿಗೆ ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಹಲ್ಲೆ ಪ್ರಕರಣದ ಕುರಿತು ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಸತೀಶ್ ಮತ್ತು ಆತನ ಪತ್ನಿ ಕಮಲಾಕ್ಷಿ ಎಂಬುವವರ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.