ಮಡಿಕೇರಿ, ನ. ೨೩ : ಕೇಂದ್ರ ಸರ್ಕಾರದ ವಿರುದ್ಧ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ತಾ. ೨೬ ರಿಂದ ಬೆಂಗಳೂರಿನಲ್ಲಿ ನಡೆಸಲಿರುವ ೭೨ ಗಂಟೆಗಳ ಮಹಾಧರಣಿಯಲ್ಲಿ ಕೊಡಗಿನ ೫೦೦ ಮಂದಿ ಭಾಗಿಯಾಗಲಿದ್ದಾರೆ ಎಂದು ಸಿಐಟಿಯು ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್. ಭರತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೆಹಲಿಯಲ್ಲಿ ರೈತರು ನಡೆಸಿದ ಬೃಹತ್ ಹೋರಾಟದ ಸಮಯದಲ್ಲಿ ಕೇಂದ್ರ ಸರ್ಕಾರ ಲಿಖಿತವಾಗಿ ನೀಡಿದ ಭರವಸೆಗಳನ್ನು ಇನ್ನೂ ಈಡೇರಿಸಿಲ್ಲ. ಖಾಸಗೀಕರಣವನ್ನು ಹೆಚ್ಚಿಸುತ್ತಾ ಬಂಡವಾಳಶಾಹಿಗಳಿಗೆ ನೆರವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ ಅವರು ಕೇಂದ್ರದ ಇಂತಹ ನೀತಿಗಳ ವಿರುದ್ಧ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.

ಎಲ್ಲ ಬೆಳೆಗಳಿಗೂ ವಿಮೆ ಒದಗಿಸುವ ಸಮಗ್ರ ಸಾರ್ವಜನಿಕ ವಿಮಾ ಯೋಜನೆಯನ್ನು ಜಾರಿಗೆ ತರಬೇಕು ಹಾಗೂ ಸಮಗ್ರ ಸಾಲ ಮನ್ನಾ ಯೋಜನೆಯನ್ನು ಜಾರಿಗೊಳಿಸಬೇಕು.

ರೈತರ ಉತ್ಪನ್ನಗಳಿಗೆ ಎಂ.ಎಸ್. ಸ್ವಾಮಿನಾಥನ್ ಶಿಫಾರಸ್ಸಿನ ಸೂತ್ರದಂತೆ ಕನಿಷ್ಟ ಬೆಂಬಲ ಬೆಲೆ ಹಾಗೂ ಖರೀದಿ ಖಾತರಿ ಒದಗಿಸುವ ಶಾಸನ ಜಾರಿ ಮಾಡಬೇಕು. ರೈತರಿಗೆ ನೀಡುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ವಿದ್ಯುತ್‌ಚ್ಛಕ್ತಿ ಮೇಲಿನ ಸಬ್ಸಿಡಿ ಮೊತ್ತ ಹೆಚ್ಚಿಸಬೇಕು. ರೈತರ ಆತ್ಮಹತ್ಯೆ ತಡೆಯಲು ಎಲ್ಲ ಬಗೆಯ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಧರಣಿಯಲ್ಲಿ ಮನವಿ ಮಾಡಲಾಗುವುದು ಎಂದರು.

ನಿರುದ್ಯೋಗಿಗಳಿಗೆ ಉದ್ಯೋಗ ನೀಡುವಂತಹ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲೇ ಹೊರಗುತ್ತಿಗೆಯಡಿ ಕಾರ್ಯನಿರ್ವಹಿಸುವ ಸಿಬ್ಬಂದಿ ಇದ್ದಾರೆ. ಆ ಕಚೇರಿಯಲ್ಲೇ ಎಲ್ಲ್ಲಾ ಖಾಯಂ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಿಲ್ಲ ಎಂದು ಪಿ.ಆರ್.ಭರತ್ ಹೇಳಿದರು. ಸಂಘಟನೆಯ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು ಮಾತನಾಡಿ, ೨೧ಕ್ಕೂ ಅಧಿಕ ಬೇಡಿಕೆಗಳನ್ನಿಟ್ಟುಕೊಂಡು ಹೋರಾಟ ನಡೆಸಲಾಗುತ್ತಿದೆ ಎಂದರು. ಸಂಘಟನೆಯ ಮುಖಂಡರು ಎನ್.ಡಿ. ಕುಟ್ಟಪ್ಪ ಗೋಷ್ಠಿಯಲ್ಲಿ ಇದ್ದರು.