ಕಣಿವೆ, ನ. ೧೭: ಕುಶಾಲನಗರದ ಗುಂಡೂರಾವ್ ಬಡಾವಣೆಗೆ ಸ್ಥಳೀಯ ಪುರಸಭೆ ಆಡಳಿತ ಮೂಲ ಸೌಕರ್ಯಗಳನ್ನು ಪೂರೈಸುವ ಮೂಲಕ ಇಲ್ಲಿ ವಾಸವಿರುವ ನಿವಾಸಿಗಳಿಗೆ ಅನುಕೂಲ ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕುಶಾಲನಗರ ಪಟ್ಟಣ ಪಂಚಾಯಿತಿಯಾಗಿದ್ದ ಅವಧಿಯಲ್ಲಿ ಅಂದರೆ ೨೦೧೭ ರಲ್ಲಿ ಸ್ಥಳೀಯ ಗುಂಡೂರಾವ್ ಬಡಾವಣೆಯಲ್ಲಿ ನಿವೇಶನಗಳ ಹರಾಜು ಪ್ರಕ್ರಿಯೆ ನಡೆಸಿದಾಗ ಬಹಳಷ್ಟು ಮಂದಿ ನಿವೇಶನಗಳನ್ನು ಖರೀದಿಸಿ ತಮ್ಮಿಚ್ಛೆಯ ಮನೆಗಳನ್ನು ಕಟ್ಟಿಕೊಂಡು ವಾಸವಿದ್ದಾರೆ.

ಆದರೆ, ಮನೆಯಲ್ಲಿನ ತ್ಯಾಜ್ಯ ನೀರು ಅಥವಾ ಮಳೆಯ ನೀರು ಹರಿಯಲು ಸುಸಜ್ಜಿತ ಚರಂಡಿಗಳು ಇಲ್ಲದ ಕಾರಣ ನೀರು ಸರಾಗವಾಗಿ ಹರಿಯುತ್ತಿಲ್ಲ.

ಹಾಗಾಗಿ ಗೃಹ ಬಳಕೆಯ ತ್ಯಾಜ್ಯ ನೀರು ಅಲ್ಲಲ್ಲೇ ನಿಲುಗಡೆ ಗೊಂಡು ಸಾಂಕ್ರಾಮಿಕ ರೋಗ ಭೀತಿ ಮೂಡಿಸಿದೆ ಎಂದು ಸ್ಥಳೀಯ ನಿವಾಸಿಗಳಾದ ಆಯಿಷಾ, ವಸಂತ, ಶ್ರೀನಿವಾಸ್, ರಫೀಕ್ ಮೊದಲಾದವರು "ಶಕ್ತಿ"ಯೊಂದಿಗೆ ದೂರಿಕೊಂಡಿದ್ದಾರೆ.

ವಿದ್ಯುತ್ ಕಂಬಗಳೂ ಇಲ್ಲ

ಬಡಾವಣೆಯಲ್ಲಿ ಸರಿಯಾಗಿ ವಿದ್ಯುತ್ ಕಂಬಗಳು ಕೂಡ ಇಲ್ಲದ ಕಾರಣ ಮನೆಗಳನ್ನು ಕಟ್ಟುವವರು ಸ್ವತಃ ಹಣ ಭರಿಸಿ ಮುಖ್ಯ ರಸ್ತೆಯಂಚಿನಲ್ಲಿ ಇರುವ ಕಂಬಗಳಿAದ ತಮ್ಮ ಮನೆಗಳವರೆಗೆ ವಿದ್ಯುತ್ ಕಂಬಗಳನ್ನು ಹಾಕಿಸಿಕೊಂಡು ವಿದ್ಯುತ್ ಸಂಪರ್ಕ ಪಡೆಯುವಂತಾಗಿದೆ.

ಹೀಗಾಗಿ ಇಲ್ಲಿನ ಬಹುತೇಕ ಮಂದಿ ಹತ್ತಾರು ಸಂಖ್ಯೆಯ ವಿದ್ಯುತ್ ಕಂಬಗಳನ್ನು ಹಾಕಿಸಿಕೊಂಡು ವಿದ್ಯುತ್ ಸಂಪರ್ಕ ಪಡೆದು ಕೊಂಡಿದ್ದಾರೆ.

ಟಿಸಿ ಸರಿಯಿಲ್ಲ

ಗುಂಡೂರಾವ್ ಬಡಾವಣೆ ಯಲ್ಲಿನ ನಿವಾಸಿಗಳಿಗೆ ವಿದ್ಯುತ್ ಪೂರೈಸಲು ಅಳವಡಿಸಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ (ಟಿಸಿ) ಕಡಿಮೆ ಸಾಮರ್ಥ್ಯ ಉಳ್ಳದ್ದಾಗಿದ್ದು ಮನೆಗಳಲ್ಲಿ ರಾತ್ರಿ ಬೆಳಗುವ ಬಲ್ಬ್ಗಳು ಸರಿಯಾಗಿ ಉರಿಯುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಆಯಿಷಾ ದೂರಿದ್ದಾರೆ.

ಕಾವೇರಿ ನೀರೂ ಇಲ್ಲ

ಗುಂಡೂರಾವ್ ಬಡಾವಣೆಯಲ್ಲಿ ವಾಸ ಮಾಡುತ್ತಿರುವ ನಿವಾಸಿಗಳಿಗೆ ಕುಡಿಯಲು ಸ್ಥಳೀಯ ಪುರಸಭೆ ಕಾವೇರಿಯ ನೀರು ಕೂಡ ಹರಿಸುತ್ತಿಲ್ಲ. ಹಾಗಾಗಿ ಕೊಳವೆ ಬಾವಿಯ ನೀರನ್ನು ಕುಡಿಯು ವಂತಾಗಿದೆ ಎಂದು ಹಲವು ಮಂದಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ರಸ್ತೆಗಳೂ ಸರಿಯಿಲ್ಲ

ಗುಂಡೂರಾವ್ ಬಡಾವಣೆಯಲ್ಲಿ ನಿರ್ಮಿಸಿದ್ದ ಸಂಪರ್ಕ ರಸ್ತೆಗಳೂ ಕೂಡ ಸರಿಯಿಲ್ಲದೇ ಕಾಡು ಗಿಡಗಳು ಬೆಳೆದು ನಿಂತಿರುವುದು ಒಂದೆಡೆ ಯಾದರೆ, ಇರುವ ರಸ್ತೆಗಳು ಕಲ್ಲು, ಮುಳ್ಳು, ಹಳ್ಳ, ದಿಣ್ಣೆಗಳಿಂದ ಕೂಡಿದ್ದು ವಾಹನಗಳ ಸಂಚಾರ ಕ್ಕಿರಲಿ, ಕೊನೆಯ ಪಕ್ಷ ಪಾದಚಾರಿಗಳ ಸಂಚಾರಕ್ಕೂ ಯೋಗ್ಯವಾಗಿಲ್ಲ.

ಪುರಸಭೆ ಆಡಳಿತದ ಬೇಜವಬ್ದಾರಿ

ಖಾಸಗಿ ವ್ಯಕ್ತಿಗಳು ನೂತನವಾಗಿ ಜನವಸತಿ ಬಡಾವಣೆಗಳನ್ನು ಮಾಡುವಾಗ ಹತ್ತು ಹಲವು ಷರತ್ತುಗಳನ್ನು ಹಾಕುವ ಪುರಸಭೆ ಅಥವಾ ಸ್ಥಳೀಯ ಕುಶಾಲನಗರ ಯೋಜನಾ ಪ್ರಾಧಿಕಾರ ಸ್ವತಃ ತಾನೇ ಬಡಾವಣೆ ನಿರ್ಮಿಸಿ ಸಾರ್ವಜ ನಿಕರಿಗೆ ವಸತಿ ನಿವೇಶನಗಳನ್ನು ಹರಾಜು ಹಾಕಿ ಹಣ ಪಡೆದು ಕೊಂಡಿದ್ದರೂ ಕೂಡ ಏಕೆ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಇಲ್ಲಿನ ನಿವಾಸಿಗಳು ಪ್ರಶ್ನಿಸಿದ್ದಾರೆ.

ಕೂಡಲೇ ಗುಂಡೂರಾವ್ ಬಡಾವಣೆಯ ಸಮಸ್ಯೆಗಳ ಬಗ್ಗೆ ಸ್ಥಳೀಯ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗದ ಕಾರಣ ನಾವು ಜಿಲ್ಲಾಧಿಕಾರಿಗಳ ಬಳಿ ತೆರಳಿ ಪ್ರತಿಭಟನೆ ನಡೆಸಿ ಪುರಸಭೆ ವಿರುದ್ಧ ದೂರು ದಾಖಲಿಸುವ ಬಗ್ಗೆ ಆಯಿಷಾ ಎಚ್ಚರಿಸಿದ್ದಾರೆ.

- ಕೆ.ಎಸ್. ಮೂರ್ತಿ, ಕಣಿವೆ