*ಸಿದ್ದಾಪುರ, ನ. ೧೫: ಕುಶಾಲನಗರದಿಂದ ಸಿದ್ದಾಪುರಕ್ಕೆ ತೆರಳುವ ರಂಗಸಮುದ್ರದ ಕಬ್ಬಿಣ ಸೇತುವೆ, ಬಾಳುಗೋಡು, ಬಸವೇಶ್ವರ ದೇವಾಲಯದವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ. ರಸ್ತೆ ಅಭಿವೃದ್ಧಿ ಕಾರ್ಯವನ್ನು ತಕ್ಷಣ ಆರಂಭಿಸಬೇಕೆAದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಈ ಹೆದ್ದಾರಿ ಆಡಳಿತ ವ್ಯವಸ್ಥೆಯ ನಿರ್ಲಕ್ಷö್ಯಕ್ಕೆ ಒಳಪಟ್ಟಿದೆ. ರಸ್ತೆ ಸಂಪೂರ್ಣವಾಗಿ ಹೊಂಡ, ಗುಂಡಿಗಳಾಗಿದ್ದು, ದ್ವಿಚಕ್ರ ವಾಹನ ಚಾಲಕರು ಹಾಗೂ ಪಾದಚಾರಿಗಳು ಬಿದ್ದು ಆಸ್ಪತ್ರೆ ಸೇರಿದ ಘಟನೆಯೂ ನಡೆದಿದೆ. ಈ ಹೆದ್ದಾರಿಯಲ್ಲಿ ಪ್ರತಿದಿನ ಕಾಫಿ ಸೇರಿದಂತೆ ಸರಕುಗಳನ್ನು ಸಾಗಾಟ ಮಾಡುವ ಲಾರಿಗಳು ಸಂಚರಿಸುತ್ತವೆ. ಕೇರಳ ರಾಜ್ಯಕ್ಕೆ ಇದೇ ಮಾರ್ಗವಾಗಿ ಭಾರೀ ವಾಹನಗಳು ತೆರಳುತ್ತವೆ. ಹೆಸರುವಾಸಿ ಪ್ರವಾಸಿತಾಣ ದುಬಾರೆ ಮತ್ತು ಚಿಕ್ಲಿಹೊಳೆ ಜಲಾಶಯಕ್ಕೆ ಪ್ರತಿದಿನ ಅಧಿಕ ಸಂಖ್ಯೆಯ ಪ್ರವಾಸಿ ವಾಹನಗಳು ಆಗಮಿಸುತ್ತವೆ.

ಸುಂದರವಾದ ಪ್ರಕೃತಿ ಸೌಂದರ್ಯ ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಈ ರೀತಿ ರಸ್ತೆಗಳು ಹದಗೆಟ್ಟಿರುವ ಬಗ್ಗೆ ಪ್ರವಾಸಿಗರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಗುಂಡಿ ಬಿದ್ದ ರಸ್ತೆಯಿಂದಾಗಿ ವಾಹನಗಳು ಹಾನಿಗೊಳಗಾಗಿ ಬದಿಯಲ್ಲಿ ನಿಲುಗಡೆಗೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ರಸ್ತೆ ತೆರಿಗೆಯನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡಿ ಈ ರೀತಿಯ ಹದಗೆಟ್ಟ ರಸ್ತೆಯಲ್ಲಿ ನಮ್ಮ ವಾಹನವನ್ನು ಕೊಂಡೊಯ್ಯಬೇಕೆ ಎಂದು ವಾಹನ ಚಾಲಕರು ಪ್ರಶ್ನಿಸುತ್ತಿದ್ದಾರೆ.

ರಸಲ್ ಪುರದವರೆಗೆ ರಸ್ತೆ ದುರಸ್ತಿಯಾಗಿದ್ದು, ಮುಂದಿನ ರಸ್ತೆಯನ್ನು ಹಾಗೇ ಬಿಡಲಾಗಿದೆ. ಈ ಹಿಂದೆ ಅಪ್ಪಚ್ಚು ರಂಜನ್ ಅವರು ಶಾಸಕರಾಗಿದ್ದಾಗ ರಸ್ತೆ ಅಭಿವೃದ್ಧಿಗಾಗಿ ಭೂಮಿಪೂಜೆ ಆಗಿತ್ತೇ ಹೊರತು ಇಲ್ಲಿಯವರೆಗೆ ಕಾಮಗಾರಿ ಆರಂಭಗೊAಡಿಲ್ಲವೆAದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯ ಒಂದು ಭಾಗದಲ್ಲಿ ಚಿಕ್ಲಿಹೊಳೆ ಜಲಾಶಯದ ಕಾಲುವೆ ನೀರು ಹರಿಯುತ್ತಿದ್ದರೆ, ಮತ್ತೊಂದು ಭಾಗದಲ್ಲಿ ಗದ್ದೆಗಳಿಗೆ, ರಸ್ತೆ ನಿತ್ಯ ನೀರಿನಿಂದ ಕೂಡಿರುವುದರಿಂದ ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುವ ಅಗತ್ಯವಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಗ್ರಾಮಸ್ಥರು ರಸ್ತೆಗಿಳಿದು ಹೋರಾಡುವ ಮೊದಲು ಶಾಸಕರು ಸ್ಥಳ ಪರಿಶೀಲನೆ ನಡೆಸಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು ಸೂಕ್ತ. -ಅಂಚೆಮನೆ ಸುಧಿ