ಕುಶಾಲನಗರ, ನ. ೧೩: ಹಾರಂಗಿ ಅಣೆಕಟ್ಟು ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಂದಾಜು ೫೫ ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಹೇಳಿದರು. ಅವರು ಇತ್ತೀಚೆಗೆ ಹಾರಂಗಿಯಲ್ಲಿ ‘ಶಕ್ತಿ’ಯೊಂದಿಗೆ ಮಾತನಾಡಿ, ಹಾರಂಗಿ ಉದ್ಯಾನವನವನ್ನು ಇನ್ನಷ್ಟು ಹೆಚ್ಚು ಸುಂದರಗೊಳಿಸುವ ನಿಟ್ಟಿನಲ್ಲಿ ಐದು ಕೋಟಿ ರೂಗಳ ಪ್ರಸ್ತಾವನೆ ಸಲ್ಲಿಸಲಾಗುವುದು. ಜಲಾಶಯದ ಕೆಳಭಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸೇತುವೆಯೊಂದನ್ನು ನಿರ್ಮಾಣ ಮಾಡಲು ಅಂದಾಜು ೫೦ ಕೋಟಿ ಪ್ರಸ್ತಾವನೆ ಸಲ್ಲಿಸಲಾಗುವುದು. ಹಾರಂಗಿ ಪ್ರದೇಶಕ್ಕೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮಕ್ಕೆ ಅಗತ್ಯ ವಿರುವ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಏಳು ಕಿಲೋಮೀಟರ್ ಉದ್ದದ ನಾಲೆಯ ಆಧುನಿಕರಣ ಮತ್ತು ೨೧ ವಿತರಣಾ ನಾಲೆಗಳ ಅಭಿವೃದ್ಧಿ ಕಾಮಗಾರಿ ಅಂದಾಜು ೧೨೦ ಕೋಟಿ ರೂ ವೆಚ್ಚದಲ್ಲಿ ನಡೆಯಲಿದೆ. ಈ ಬಗ್ಗೆ ಈಗಾಗಲೇ ಇಲಾಖೆ ಮೂಲಕ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಮಾಹಿತಿಯಿತ್ತರು. ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕೆÀ್ಷ ಕೆ.ಪಿ. ಚಂದ್ರಕಲಾ, ಹಾರಂಗಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರ ದೇವೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಮತ್ತಿತರರು ಇದ್ದರು.