ಭಾಗಮಂಡಲ, ನ. ೧೩: ಸಮೀಪದ ಚರಂಡೇಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ತಾ. ೧೪ರಂದು ಮಂಗಳವಾರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.

ಶಾಲಾ ಶೈಕ್ಷಣಿಕ ಸಮಿತಿ ಹಾಗೂ ಗ್ರಾಮದ ಮಕ್ಕಳ ದಿನಾಚರಣೆಯ ಕ್ರಿಯಾ ಸಮಿತಿ ಸಂಯುಕ್ತ ಆಶಯದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಎ.ಎಸ್. ಪೊನ್ನಣ್ಣ ನೆರವೇರಿಸುವರು. ಚರಂಡೇಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ತೊತ್ತಿಯನ ಹೆಚ್. ಧರಣಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ವೀರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕೂಡಕಂಡಿ ದಯಾನಂದ ಮುಖ್ಯ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಂದಚೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪೊಡನೋಳನ ದಿನೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ ದೊಡ್ಡೇಗೌಡ, ಠಾಣಾಧಿಕಾರಿ ಶೋಭಾ ಲಮಾಣಿ, ಕುಂದಚೇರಿ ಗ್ರಾಮ ಪಂಚಾಯಿತಿ ಸದಸ್ಯ ಬೊಮ್ಮಿಯನ ಎಂ. ಬಸಪ್ಪ, ಭಾಗಮಂಡಲ ಕ್ಲಸ್ಟರ್ ಸಿಆರ್ ಪಿ ನಿಶಾ, ಮುಖ್ಯ ಶಿಕ್ಷಕಿ ಬಿ. ಎಸ್ ಪುಷ್ಪವೇಣಿ, ಮಕ್ಕಳ ದಿನಾಚರಣೆ ಕ್ರಿಯಾ ಸಮಿತಿ ಅಧ್ಯಕ್ಷ ಬಿ.ಎ ಚಿತ್ರ, ಮಾಜಿ ಸೈನಿಕ ಕೂಡಕಂಡಿ ಎಂ. ಪಳಂಗಪ್ಪ, ಸ್ಥಳದಾನಿ ಬೊಮ್ಮಿಯನ ಕುಟುಂಬಸ್ಥರು ಪಾಲ್ಗೊಳ್ಳಲಿರುವರು. ಈ ಸಂದರ್ಭ ನಿವೃತ್ತ ಸುಬೇದಾರ್ ಮೇಜರ್ ಪಾಣತಲೆ ಬಿ. ಕಿರಣ್ ಕುಮಾರ್ ಅವರನ್ನು ಸನ್ಮಾನಿಸಲಾಗುವುದು.

ಸಂಜೆ ೬ ಗಂಟೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಟಲ್ ಬಿಹಾರಿ ವಾಜಪೇಯಿ ಶಾಲೆಯ ಪ್ರಾಂಶುಪಾಲರಾದ ಲೋಕೇಶ್ ಉದ್ಘಾಟಿಸಲಿದ್ದಾರೆ. ಗೌರಿ ಗಣೇಶ ಸಮಿತಿ ಅಧ್ಯಕ್ಷ ಶಿವಪ್ಪ ಪೂಜಾರಿ ಹಾಗೂ ಮಕ್ಕಳ ದಿನಾಚರಣೆ ಕ್ರಿಯಾ ಸಮಿತಿ ಕಾರ್ಯದರ್ಶಿ ಕಿಶೋರ್ ಕುಮಾರ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.