ಸೋಮವಾರಪೇಟೆ, ನ. ೧೧: ಮಾರುತಿ ಓಮ್ನಿ ಕಾರು ಮತ್ತು ಬುಲೆಟ್ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಚಾಲಕ ದುರ್ಮರಣಕ್ಕೀಡಾಗಿರುವ ಘಟನೆ ಸಮೀಪದ ತಾಕೇರಿ ಗ್ರಾಮದಲ್ಲಿ ನಡೆದಿದೆ. ತಾಕೇರಿ ಗ್ರಾಮದ ಚಿಣ್ಣಪ್ಪ ಅವರ ಪುತ್ರ ಸಂದೀಪ್ (೩೬) ಎಂಬಾತನೇ ಸಾವನ್ನಪ್ಪಿದ ದುರ್ದೈವಿ. ಮನೆಯಿಂದ ಕೆಲಸಕ್ಕೆಂದು ಪಟ್ಟಣಕ್ಕೆ ಆಗಮಿಸುತ್ತಿದ್ದ ಸಂದರ್ಭ ಮಧ್ಯಾಹ್ನ ೨.೪೦ರ ಸುಮಾರಿಗೆ ತಾಕೇರಿ ಗ್ರಾಮದ ಮುಖ್ಯರಸ್ತೆಯಲ್ಲಿ ಮಾರುತಿ ಓಮ್ನಿ ಕಾರು ಡಿಕ್ಕಿಯಾಗಿದೆ. ಇದರಿಂದ ಗಂಭೀರ ಗಾಯಗೊಂಡ ಸಂದೀಪ್‌ನನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲು ಮುಂದಾದ ಸಂದರ್ಭ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಮೃತನ ತಂದೆ ಚಿಣ್ಣಪ್ಪ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಡಿಕ್ಕಿ ಪಡಿಸಿ ಸ್ಥಳದಿಂದ ಪರಾರಿ ಯಾಗಿರುವ ಮಾರುತಿ ಓಮ್ನಿ ಕಾರು ಮತ್ತು ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಕೃಷಿ ಸೇರಿದಂತೆ ಮರದ ವ್ಯಾಪಾರ ವೃತ್ತಿ ಮಾಡಿಕೊಂಡಿದ್ದ ಸಂದೀಪ್ ಅವಿವಾಹಿತನಾಗಿದ್ದು, ಕಳೆದ ಒಂದು ವಾರದ ಹಿಂದಷ್ಟೇ ವಿವಾಹ ನಿಗದಿಯಾಗಿತ್ತು.