ಮಡಿಕೇರಿ, ನ. ೧೧ : ವೀರಾಜಪೇಟೆಯ ಕಲಾವಿದ ಸಾದಿಕ್ ಹಂಸ ಅವರು ಏರ್ಪಡಿಸಿರುವ ೫೧ ದಿನಗಳ ವಿಶೇಷ ಕಲಾ ಉತ್ಸವವನ್ನು ಇಂದು ಉಪ ತಹಶೀಲ್ದಾರ್ ಪ್ರದೀಪ್ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಜಿಲ್ಲಾ ಖಜಾಂಚಿ ಸಂಪತ್‌ಕುಮಾರ್, ವೀರಾಜಪೇಟೆ ರೋಟರಿ ಅಧ್ಯಕ್ಷ ಬನ್ಸಿ ಪೂವಯ್ಯ, ಕರ್ನಲ್ ಸುರೇಶ್ ಭಾಗವಹಿಸಿ ಕಲಾವಿದರಿಗೆ ಸರಕಾರದ ವಿಶೇಷ ಸವಲತ್ತುಗಳು ಒದಗುವಂತಾಗಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.

ಸ್ವಾಗತ ಮಾಡಿ ಮಾತನಾಡಿದ ಕಲಾವಿದ ಸಾದಿಕ್ ಹಂಸ ಅವರು, ೫೧ ದಿನಗಳ ಶಿಬಿರದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಜಾರ್ಖಂಡಿನ ಕಲಾವಿದರು ಭಾಗವಹಿಸುತ್ತಿದ್ದಾರೆ. ಉತ್ಸವದ ಸಂದರ್ಭ ವಿವಿಧೆಡೆಗಳಲ್ಲಿ ಶಿಬಿರಗಳು, ಸಿನಿಮಾ ಕಲಾ ಉತ್ಸವ, ಬುಡಕಟ್ಟು ಕಲೋತ್ಸವ, ಫೋಟೋಗ್ರಫಿ ಪ್ರದರ್ಶನ, ಕನ್ನಡ ಕಾರ್ಯಕ್ರಮ ಇತ್ಯಾದಿ ಹಮ್ಮಿಕೊಳ್ಳಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವಿದ್ಯಾರ್ಥಿಗಳಲ್ಲಿ ಕಲಾ ಜಾಗೃತಿ ಮೂಡಿಸಲಾಗುವುದು. ಈ ಸಂದರ್ಭ ಹಾಸಿಗೆ ಹಿಡಿದಿರುವ ಹಲವು ಹಿರಿಯರನ್ನು ಭೇಟಿಯಾಗಿ, ಅಲ್ಲಿಯೇ ಅವರ ಚಿತ್ರ ಬಿಡಿಸಿಕೊಟ್ಟು, ಹುರಿದುಂಬಿಸಲಾಗುವುದು ಎಂದು ವಿವರಿಸಿದರು.

ಇಂದು ಬೆಂಗಳೂರಿನ ಕಲಾವಿದ ಮಂಜು ಗೌಡ ಅವರು ಹಲವರ ಭಾವಚಿತ್ರ ಬಿಡಿಸಿ ಪ್ರಶಂಸೆಗೆ ಪಾತ್ರರಾದರು. ಕೊಡಗಿನ ಕಲಾವಿದ ಮಾಲ್ದಾರೆ ಬಾವ ಅವರು ಪ್ರಾರ್ಥಿಸಿ, ವಂದನಾರ್ಪಣೆ ಸಲ್ಲಿಸಿದರು. ಅಧ್ಯಾಪಕಿ ವಿಶಾಲಾಕ್ಷಿ ನಿರೂಪಣೆ ಮಾಡಿದರು.