ವೀರಾಜಪೇಟೆ, ನ. ೧೧: ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಮೈಸೂರು ಸಹಯೋಗದೊಂದಿಗೆ ಶ್ರೀ ವಾತ್ಸಲ್ಯ ಸೋಷಿಯಲ್ ಅಂಡ್ ಕಲ್ಚರಲ್ ಸೊಸೈಟಿ ವತಿಯಿಂದ ನಗರದ ಸುಣ್ಣದ ಬೀದಿಯ ಹರಿಕೇರಿಯ ಶ್ರೀ ದೊಡ್ಡಮ್ಮ ತಾಯಿ ಚಿಕ್ಕಮ್ಮ ತಾಯಿ ದೇವಾಲಯ ಭವನದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮನ್ನು ದೀಪ ಬೆಳಗುವ ಮೂಲಕ ಪುರಸಭೆ ಸದಸ್ಯ ರಜನಿಕಾಂತ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮನುಷ್ಯನಿಗೆ ಆರೋಗ್ಯ ಬಲು ಮುಖ್ಯವಾಗಿದೆ ಪ್ರತಿಯೊಬ್ಬರೂ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ವೈದ್ಯರಾದ ಡಾ. ಹರೀಶ್ ಮಾತನಾಡಿ, ಒಬ್ಬ ವ್ಯಕ್ತಿ ಆರು ತಿಂಗಳಿಗೆ ಆದರೂ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಒಂದೇ ಬಗೆಯ ಆಹಾರವನ್ನು ಸೇವಿಸಬಾರದು. ಸೊಪ್ಪು ತರಕಾರಿಗಳನ್ನು ಸೇವಿಸಬೇಕು. ನಮ್ಮ ಆರೋಗ್ಯದ ಕಡೆ ಅತಿ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು. ಶಿಬಿರದಲ್ಲಿ ನೂರಕ್ಕೂ ಹೆಚ್ಚು ಮಂದಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.

ಈ ಸಂದರ್ಭ ಶ್ರೀ ವಾತ್ಸಲ್ಯ ಸೋಷಿಯಲ್ ಅಂಡ್ ಕಲ್ಚರಲ್ ಸೊಸೈಟಿ ಕಾರ್ಯದರ್ಶಿ ಅನ್ನಪೂರ್ಣ, ವೈದ್ಯೆ ಡಾ. ಸರಿಷ್ಮಾ, ಸಿಬ್ಬಂದಿಗಳಾದ ಅನುಷ, ಉಷಾ, ಪುರಸಭೆ ಸದಸ್ಯ ಜಲೀಲ್ ಅಹಮ್ಮದ್ ಸೇರಿದಂತೆ ಹರಿಕೇರಿಯ ನಿವಾಸಿಗಳು ಹಾಜರಿದ್ದರು.