ಮುಳ್ಳೂರು, ನ. ೧೧: ೬೮ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಸಮೀಪದ ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯ ತಳಗೂರು ಗ್ರಾಮದ ಜ್ಞಾನ ಜ್ಯೋತಿ ಮಕ್ಕಳ ತಂಡದÀ ವತಿಯಿಂದ ಗ್ರಾಮದ ಮಕ್ಕಳಿಂದ ಕನ್ನಡ ಭಾಷೆ, ಸಂಸ್ಕೃತಿ ಕುರಿತಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು.

ಗ್ರಾಮದ ಕಿರಿಯ ಪ್ರಾಥಮಿಕ ಶಾಲಾ ಮುಂಭಾಗದಲ್ಲಿರುವ ಧ್ವಜ ಸ್ತಂಭದಲ್ಲಿ ಕನ್ನಡ ಧ್ವಜಾರೋಹಣವನ್ನು ಗ್ರಾಮದ ಹಿರಿಯರಿಂದ ನೆರವೇರಿಸಲಾಯಿತು. ಶಾಲಾ ಆವರಣವನ್ನು ತಳಿರು ತೋರಣಗಳಿಂದ ಅಲಂಕರಿಸಿದ ಮಕ್ಕಳು ಶಾಲಾ ಮುಂಭಾಗದಲ್ಲಿ ಹಳದಿ ಕೆಂಪು ಬಣ್ಣದ ರಂಗೋಲಿಯಲ್ಲಿ ಕರ್ನಾಟಕದ ಭೂಪಟವನ್ನು ಬಿಡಿಸಿದರು.

ನಂತರ ಗ್ರಾಮದ ಮಕ್ಕಳÀ ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾಷಣ, ಹಾಡು, ನೃತ್ಯ, ವಿವಿಧ ನೃತ್ಯ ರೂಪಕಗಳನ್ನು ನೆರೆದಿದ್ದ ಗ್ರಾಮಸ್ಥರ ಮುಂದೆ ಪ್ರದರ್ಶಿಸಿದರು. ಹಂಡ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಉದಯ್‌ಕುಮಾರ್ ಕನ್ನಡ ರಾಜ್ಯೋತ್ಸವದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಹಿರಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.