ಕೂಡಿಗೆ, ನ. ೧೦: ಶ್ರೀ ಬಸವೇಶ್ವರ ದೇವಾಲಯ ಹಾಗೂ ಸ್ಥಿರ ಬಿಂದು ಪ್ರತಿಷ್ಠಾಪನಾ ಮಹೋತ್ಸವು ತಾ. ೧೫ ಮತ್ತು ೧೬ ರಂದು ಶ್ರೀ ಬಸವೇಶ್ವರ ದೇವಾಲಯ ಸಮಿತಿಯ ವತಿಯಿಂದ ಹೆಬ್ಬಾಲೆಯಲ್ಲಿ ನಡೆಯಲಿದೆ.

ರೂ. ೧.೨೫ ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬಸವೇಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನೆ, ಕಲಶಾರೋಹಣ, ದೇವಾಲಯದ ಉದ್ಘಾಟನಾ ಮಹೋತ್ಸವ ಸಮಾರಂಭ ತಾ. ೧೫ ರಿಂದ ಆರಂಭಗೊಳ್ಳಲಿದೆ.

ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜನ ಸ್ವಾಮಿಗಳ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಎನ್. ಬಸವರಾಜ್ ತಿಳಿಸಿದ್ದಾರೆ.

ತಾ. ೧೫ ರಂದು ಗೋದುಳಿ ಲಗ್ನದಲ್ಲಿ ಗಂಗಾಪೂಜೆ, ಗೋಪೂಜೆ, ವಿಗ್ರಹ ಪುಣ್ಯಾಪಿಯೊಂದಿಗೆ ವಿವಿಧ ಹೋಮಹವನ ಕಾರ್ಯಕ್ರಮಗಳು ನಡೆಯಲಿವೆ. ತಾ. ೧೬ ರಂದು ಶ್ರೀ ಬಸವೇಶ್ವರ ಸ್ವಾಮಿಯವರ ವಿಗ್ರಹ ಪ್ರತಿಷ್ಠಾಪನೆ ನಂತರ ವಿವಿಧ ಪೂಜಾ ಕೈಂಕರ್ಯಗಳು ಸೇರಿದಂತೆ ಮಹಾಮಂಗಳಾತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ, ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವು ನಡೆಯಲಿದೆ. ನಂತರ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶಾಂತಮಲ್ಲಿಕಾರ್ಜನ ಸ್ವಾಮಿ, ತೊರೆನೂರು ವಿರಕ್ತಮಠದ ಶ್ರೀ ಮಲ್ಲೇಶಸ್ವಾಮಿ, ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತಸ್ವಾಮಿ, ವೀರಾಜಪೇಟೆ ಶ್ರೀ ಆತ್ಯಾನಂದಪುರಿ ಸ್ವಾಮಿ, ಅರೆಮಾದನಹಳ್ಳಿ ಶ್ರೀ ಪರಮಪೂಜ್ಯ ಶಿವ ಸುಜ್ಞಾನ ತೀರ್ಥ ಸ್ವಾಮಿ ವಹಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಸವೇಶ್ವರ ದೇವಾಲಯ ಜೀರ್ಣೋದ್ಧಾರ ಮತ್ತು ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷ ಹೆಚ್.ಎನ್. ಬಸವರಾಜ್ ಸಲ್ಲಿಸಿದ್ದಾರೆ. ಉದ್ಘಾಟನೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಬಿ.ಎ. ಜೀವಿಜಯ, ಜೆ.ಡಿ.ಎಸ್. ಮುಖಂಡ ನಾಪಂಡ ಮುತ್ತಪ್ಪ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಸೇರಿದಂತೆ ಹಲವಾರು ಗಣ್ಯರು, ದಾನಿಗಳು ಭಾಗವಹಿಸಲಿದ್ದಾರೆ ಎಂದು ಸಮಿತಿಯ ಕಾರ್ಯದರ್ಶಿ ಹೆಚ್.ವಿ. ರಾಜು ತಿಳಿಸಿದ್ದಾರೆ.