*ಗೋಣಿಕೊಪ್ಪ, ನ. ೧೦ : ಕೊಡಗು ಹಿಂದೂ ಮಲಯಾಳಿ ಸಮಾಜದ ಓಣಂ ಆಚರಣೆ ಕಾರ್ಯಕ್ರಮ ತಾ. ೧೨ ರಂದು ಗೋಣಿಕೊಪ್ಪ ಕೊಡಗು ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಮಾಜದ ಉಪಾಧ್ಯಕ್ಷ ಎಂ.ಎಸ್. ಸುಬ್ರಮಣಿ ತಿಳಿಸಿದ್ದಾರೆ.
ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಜನಾಂಗದ ಮಾಜಿ ಸೈನಿಕರು, ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿಯಲ್ಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಕ್ರೀಡಾ ಸಾಧಕರು, ಸಮಾಜದ ವಿಶೇಷ ಸಾಧಕ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜನಾಂಗದ ಹಿರಿಯರಾದ ರೀಜಾ ಭಟ್ಟಾದ್ರೀಪಾಡ್ ವಿಚಾರ ಮಂಡನೆ ಮಾಡಲಿದ್ದಾರೆ. ಸಮಾಜದ ಅಭಿವೃದ್ಧಿ ಕಾರ್ಯಕ್ರಮಗಳ ಪುಸ್ತಕ ಹಾಗೂ ಪಂಚಭಾಷಾ ಸಾಹಿತಿ ಡಾ. ಉಳುವಂಗಡ ಕಾವೇರಿ ಉದಯ ಅವರು ಬರೆದಿರುವ ಮಲಯಾಳಂ ಭಾಷೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮವನ್ನು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಮಹಾ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಸಂಸದ ಪ್ರತಾಪ್ ಸಿಂಹ, ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಲಿಟಲ್ ಸ್ಕಾಲರ್ಸ್ ಅಕಾಡೆಮಿ ಮುಖ್ಯಸ್ಥೆ ಪೂಜಾ ಸಜೇಶ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಚಲನಚಿತ್ರ ನಟಿ ಈರಮಂಡ ಹರಿಣಿ ವಿಜಯ್, ಪಂಚಭಾಷಾ ಸಾಹಿತಿ ಡಾ. ಉಳುವಂಗಡ ಕಾವೇರಿ ಉದಯ, ಪ್ರವಾಸೋದ್ಯಮ ನಿಗಮ ಮಾಜಿ ನಿರ್ದೇಶಕ ಬಿ.ಎನ್. ಪ್ರಕಾಶ್, ಸಮಾಜದ ಸ್ಥಾಪಕ ಅಧ್ಯಕ್ಷ ಪಿ. ಎಸ್. ಶರತ್ಕಾಂತ್, ಕಾನೂನು ಸಲಹೆಗಾರ ಕೆ.ಬಿ. ಸಂಜೀವ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಮಾಜದ ಅಧ್ಯಕ್ಷ ಆರ್.ಎನ್. ಅಮೃತ್ರಾಜನ್, ಕಾರ್ಯದರ್ಶಿ ರೀನಾ, ನಿರ್ದೇಶಕಿ ಬಿಂದು ಶಾಜಿ, ಮನುಕುಮಾರ್ ಇದ್ದರು.