ಗೋಣಿಕೊಪ್ಪಲು, ನ. ೧೦: ಸಂಶಯಾಸ್ಪದ ರೀತಿಯಲ್ಲಿ ಮೂರು ಮೇಕೆಗಳು ಸಾವನ್ನಪ್ಪಿದ ಘಟನೆ ಕಿರುಗೂರು ಬಳಿ ನಡೆದಿದೆ.

ದ.ಕೊಡಗಿನ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಿಕೊಪ್ಪಲು ಗ್ರಾಮದ ನಿವಾಸಿ ಸಣ್ಣಪ್ಪ ಎಂಬವರಿಗೆ ಸೇರಿದ ಮೇಕೆಗಳನ್ನು ಸಮೀಪದ ಭತ್ತದ ಗದ್ದೆಗಳಲ್ಲಿ ಮೇಯಲು ಬಿಡಲಾಗಿತ್ತು.

ಶುಕ್ರವಾರ ಮಧ್ಯಾಹ್ನ ವೇಳೆ ಈ ಘಟನೆ ನಡೆದಿದ್ದು, ಮೇಕೆಯ ಮಾಲೀಕರು ಸ್ಥಳಕ್ಕೆ ತೆರಳಿದ ವೇಳೆ ಘಟನೆ ಬೆಳಕಿಗೆ ಬಂದಿದೆ.

ಸುದ್ದಿ ತಿಳಿದ ಪೊನ್ನಂಪೇಟೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಈ ಭಾಗದಲ್ಲಿ ಕೆಲ ಸಮಯದ ಹಿಂದೆ ಹುಲಿ ಸಂಚಾರ ಮಾಡಿದ್ದ ಹಿನ್ನೆಲೆಯಲ್ಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು.

ಸತ್ಯಾಸತ್ಯತೆ ಬಗ್ಗೆ ಅಧಿಕಾರಿಗಳ ತಂಡ ಸಮಗ್ರ ವರದಿ ಪರಿಶೀಲನೆ ನಡೆಸುತ್ತಿದೆ.

ಮೇಲ್ನೋಟಕ್ಕೆ ಅಲ್ಲಲ್ಲಿ ಪ್ರಾಣಿಯ ಹೆಜ್ಜೆ ಗುರುತು ಕಂಡು ಬಂದಿದ್ದು, ಮೇಕೆಯ ಮೇಲೆ ದಾಳಿ ನಡೆಸಿದ ಪ್ರಾಣಿ ಯಾವುದೆಂದು ತನಿಖೆಯಿಂದಷ್ಟೆ ಮಾಹಿತಿ ಹೊರಬರಬೇಕಾಗಿದೆ.

ಘಟನಾ ಸ್ಥಳಕ್ಕೆ ತಿತಿಮತಿ ವಲಯದ ಎಸಿಎಫ್ ಸೇರಿದಂತೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

- ಹೆಚ್.ಕೆ.ಜಗದೀಶ್