ವೀರಾಜಪೇಟೆ, ನ. ೧೦: ವೀರಾಜಪೇಟೆ ಕಂದಾಯ ಇಲಾಖೆಯಲ್ಲಿ ರೈತರ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಒಂದು ಕಡತ ವಿಲೇವಾರಿಗೆ ವರ್ಷಗಟ್ಟಲೆ ಕಾಯಬೇಕು ಎಂದು ಅಮ್ಮತ್ತಿ ರೈತ ಸಂಘದ ಗೌರವ ಅಧ್ಯಕ್ಷ ಕಾವಾಡಿಚಂಡ ಗಣಪತಿ ಆರೋಪಿಸಿದ್ದಾರೆ.
ಇಲ್ಲಿನ ಪ್ರೆಸ್ಕ್ಲಬ್ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆಯಲ್ಲಿ ಕೆಲವು ಸಿಬ್ಬಂದಿಗಳನ್ನು ಹೊರತು ಪಡಿಸಿ ಬಹುತೇಕ ಸಿಬ್ಬಂದಿಗಳಿಗೆ ಇಲಾಖೆಯ ಕೆಲಸ ಕಾರ್ಯಗಳ ಬಗ್ಗೆ ಪರಿಣಿತಿ ಇಲ್ಲ. ಅರ್ಜಿ ಕೊಟ್ಟರೆ ಇದನ್ನು ಏನು ಮಾಡಬೇಕು ಎಂದು ಕೇಳುತ್ತಾರೆ.
ರೈತರು ಕಚೇರಿಗೆ ತೆರಳಿ ತಮ್ಮ ಕಡತಗಳ ಬಗ್ಗೆ ಮಾಹಿತಿ ಬಯಸಿದಾಗ ಎ.ಡಿ.ಎಲ್.ಆರ್., ಎ.ಸಿ. ಕಚೇರಿಗೆ ಹೋಗಿದೆ ಎಂದು ಹೇಳಿಕೆಗಳನ್ನು ನೀಡಿ ಜನರನ್ನು ಸತಾಯಿಸುತ್ತಾರೆ ಎಂದು ಅವರು ದೂರಿದರು. ಹಲವಾರು ವರ್ಷಗಳಿಂದ ಒಂದೇ ಸೆಕ್ಷನ್ಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ಬೇರೆ ಸೆಕ್ಷನ್ಗಳಿಗೆ ವರ್ಗಾವಣೆ ಮಾಡಿದರೆ ಕೆಲಸ ಕಲಿತುಕೊಳ್ಳಲು ಅನುಕೂಲವಾಗುತ್ತದೆ. ಶಾಸಕರು ತಾಲೂಕು ಕಚೇರಿಯ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ಅಧ್ಯಕ್ಷ ವಕೀಲ ಕೇಚಂಡ ಕುಶಾಲಪ್ಪ ಮಾತನಾಡಿ, ಪೌತಿಖಾತೆ ವಿಚಾರದಲ್ಲಿ ಹಲವಾರು ಗೊಂದಲಗಳಿವೆ. ಕೃಷಿ ಭೂಮಿ ಆರ್.ಟಿ.ಸಿ.ಯಲ್ಲಿ ಕುಟುಂಬದ ೨೦-೩೦ ಸದಸ್ಯರ ಹೆಸರಿರುತ್ತದೆ. ಕೆಲವರು ಮೃತಪಟ್ಟಿರುತ್ತಾರೆ. ಅವರ ಮರಣ ದೃಢೀಕರಣ ಪತ್ರ ಇರುವುದಿಲ್ಲ. ತಮ್ಮ ಹೆಸರಿಗೆ ಆರ್ಟಿಸಿ ಮಾಡಿಸಿಕೊಳ್ಳಲು ಕಂದಾಯ ಇಲಾಖೆಗೆ ತೆರಳಿದರೆ ನೂರಾರು ದಾಖಲೆಗಳನ್ನು ತರಲು ಹೇಳುತ್ತಾರೆ. ಮರಣ ಹೊಂದಿದವರ ಹೆಸರನ್ನು ಅಫಿಡವೀಟ್ ತಯಾರಿಸಿ ನೋಟರಿ ಮೂಲಕ ಪರ್ಯಾಯ ವ್ಯವಸ್ಥೆ ಮಾಡಿದರೆ ಉತ್ತಮವಾಗುತ್ತದೆ ಎಂದು ಸಲಹೆ ನೀಡಿದರು.
ಉಪಾಧ್ಯಕ್ಷ ಮಾಚಿಮಂಡ ಉತ್ತಪ್ಪ ಮಾತನಾಡಿ, ಜಿಲ್ಲೆಯಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರೈತರು ಬೆಳೆದಿರುವ ಬೆಳೆಗಳು ಕೈಗೆ ಸಿಗದ ರೀತಿ ಆಗುತ್ತಿದೆ. ಹಲವಾರು ರೈತರು ಹಾಗೂ ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿದರು. ಹಿಂದೆ ಇದ್ದ ಸರ್ಕಾರ ರೈತರ ೧೦ ಹೆಚ್.ಪಿ. ಪಂಪ್ಸೆಟ್ವರೆಗಿನ ಶುಲ್ಕವನ್ನು ಮನ್ನಾ ಮಾಡುವಂತೆ ತೀರ್ಮಾನಿಸಿದ್ದು, ಅದರ ಬಗ್ಗೆ ಇಂದಿನ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಖಜಾಂಚಿ ಪಟ್ಟಡ ಅರುಣ್, ಸದಸ್ಯರುಗಳಾದ ಕೊಂಗAಡ ಪ್ರಶಾಂತ್ ಮಾಚಿಮಂಡ ಮಧು, ಜೋಯಪ್ಪ ಉಪಸ್ಥಿತರಿದ್ದರು.