ಗುಡ್ಡೆಹೊಸೂರು, ನ. ೧೦: ಅರೆಭಾಷೆ ಗೌಡ ಜನಾಂಗದ ಆಚಾರ, ವಿಚಾರ, ಕಲೆ, ಸಂಸ್ಕೃತಿ ವಿಭಿನ್ನವಾಗಿದ್ದು ಇದನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸಬೇಕಾಗಿದೆ ಎಂದು ಸೋಮವಾರಪೇಟೆ ತಾಲೂಕು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ, ಕಲಾವಿದೆ ಕುದುಕುಳಿ ಮಿಲನ ಭರತ್ ಹೇಳಿದರು.

ಗುಡ್ಡೆಹೊಸೂರು ಅರೆಭಾಷೆ ಗೌಡ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಅವರು; ಇತ್ತೀಚಿನ ದಿನಗಳಲ್ಲಿ ಜನಾಂಗ ಬಾಂಧವರು ಐನ್‌ಮನೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವದು ವಿರಳವಾಗಿದೆ. ಎಲ್ಲರೂ ಒಂದುಗೂಡುವದು ಕಡಿಮೆಯಾಗಿದೆ. ಹಾಗಾಗಿ ಆಚರಣೆ, ಪದ್ಧತಿಗಳ ಬಗ್ಗೆ ಇಂದಿನ ಪೀಳಿಗೆ ಮರೆಯುವಂತಾಗಿದೆ. ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಬೆರೆಯುವಂತಹ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದು ಅನಿವಾರ್ಯವಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಮಾತನಾಡಿ, ಜನಸಾಮಾನ್ಯರೊಂದಿಗೆ ಬೆರೆತು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಜನರು ಕೂಡ ಸಹಕರಿಸಬೇಕೆಂದು ಹೇಳಿದರು. ಗುಡ್ಡೆಹೊಸೂರು ಸಮಾಜದಲ್ಲಿ ಮಹಿಳೆಯರೇ ಹೆಚ್ಚಾಗಿದ್ದು, ಸಮಾಜದ ಕಾರ್ಯವೈಖರಿ ಶ್ಲಾಘನೀಯವೆಂದು ಹೇಳಿದರು.

ಸಮಾಜದ ಅಧ್ಯಕ್ಷ ಗುಡ್ಡೆಮನೆ ವಿಶ್ವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿ ಇದೀಗ ಬೆಂಗಳೂರು ಬಿ.ಬಿ.ಎಂ.ಪಿ ಸಹಾಯಕ ಆಯುಕ್ತರಾಗಿರುವ ಸಮಾಜದ ಸದಸ್ಯರು ಆಗಿರುವ ಪುದಿಯನೆರವನ ಮಹೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಬಿ.ಭಾರತೀಶ್, ಸಮಾಜದ ಉಪಾಧ್ಯಕ್ಷೆ ಬೊಮ್ಮೆಗೌಡನ ಭುವನೇಶ್ವರಿ, ಕಾರ್ಯದರ್ಶಿ ಅಚ್ಚಾಂಡಿರ ತಾರ ಹೇಮರಾಜ್, ಖಜಾಂಚಿ ಕುಡೆಕಲ್ ರೂಪ ನಿತ್ಯಾನಂದ, ಗುರುಪ್ರಸಾದ್, ಬೊಮ್ಮುಡಿರ ಬಾಲಕೃಷ್ಣ, ಚಂಡಿರ ಮಂಜುನಾಥ್, ಪುದಿಯನೆರವನ ಪದ್ಮಾವತಿ, ಕೋಡಿ ಪೂವಯ್ಯ, ಸಲಹಾ ಸಮಿತಿ ಸದಸ್ಯರಾದ ಕರ್ಣಯ್ಯನ ಬಾಲಕೃಷ್ಣ, ಅಚ್ಚಾಂಡಿರ ಹೇಮರಾಜ್, ಮಂದೋಡಿ ಜಗನ್ನಾಥ್, ಗುಡ್ಡೆಮನೆ ಜಯಾ ವಿಶ್ವಕುಮಾರ್ ಸಮಾಜದ ಸದಸ್ಯರು ಪಾಲ್ಗೊಂಡಿದ್ದರು.

ಇದೇ ಸಂದರ್ಭ ಶಾಸಕ ಮಂಥರ್ ಗೌಡ, ಪುದಿಯನೆರವನ ಮಹೇಶ್, ಆಶಾ ಕಾರ್ಯಕರ್ತೆ ರ‍್ತೋಜಿ ರುಕ್ಮಿಣಿ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

ದ್ವಿತೀಯ ಪಿ.ಯು.ಸಿ.ಯಲ್ಲಿ ಸಾಧನೆ ಮಾಡಿದ ಸಮಾಜದ ಸದಸ್ಯರಾದ ನಂಗಾರು ಚಂದ್ರಕುಮಾರ್, ಅನಿತಾ ದಂಪತಿ ಪುತ್ರಿ ಕುಷಿ, ಕುಡೆಕಲ್ ಮಾಲಿನಿ, ಗಣೇಶ್ ಪುತ್ರಿ ಶಿವಾನಿ, ೧೦ನೇ ತರಗತಿಯಲ್ಲಿ ಕೈಬಿಲಿರ ವಸಂತ್, ಕಲ್ಪನಾ ದಂಪತಿ ಪುತ್ರಿ ಸುಶ್ಮಿತಾ, ಮೇಡತ್ತಾನ ಡಾ. ಚೇತನ್, ಚೈತ್ರ ದಂಪತಿ ಪುತ್ರಿ ಜಾಗೃತಿ, ಕುಕ್ಕುನೂರು ಅರುಣ್, ನಮಿತ ದಂಪತಿ ಪುತ್ರ ಹರ್ಷಿತ್ ದೇವಯ್ಯ, ಕಲೆಯಲ್ಲಿ ಸಾಧನೆ ಮಾಡಿದ ಬಾಜಡ್ಕ ಮುತ್ತಪ್ಪ, ಜಯಶ್ರಿ ದಂಪತಿ ಪುತ್ರಿ ಶಿವಾನಿ, ಪಿ.ಎಚ್.ಡಿ ಪದವಿ ಪಡೆದ ಸಮಾಜದ ನಿರ್ದೇಶಕ ಕೋಡಿ ಪೂವಯ್ಯ, ಪ್ರೇಮ ದಂಪತಿ ಪುತ್ರ ಡಾ. ಅಭಿಲಾಷ್ ಪೂವಯ್ಯ, ಕ್ರೀಡೆಯಲ್ಲಿ ಸಾಧನೆ ಮಾಡಿದ ಕುರುಂಜಿ ಉತ್ತಯ್ಯ, ಇಂದಿರಾ ದಂಪತಿ ಪುತ್ರ ತನ್ಮಯಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸದಸ್ಯರಾದ ಕುಂಬನ ಲತಾ ಮತ್ತು ಸಂಗಡಿಗರು ಪ್ರಾರ್ಥಿಸಿದರೆ, ಸಹ ಕಾರ್ಯದರ್ಶಿ ಗುಡ್ಡೆಮನೆ ರವಿ ಸ್ವಾಗತಿಸಿದರು. ಬೈಲೆಮನೆ ಮಾಚಮ್ಮ ವಂದಿಸಿದರು. ನಿರ್ದೇಶಕ ಕುಡೆಕಲ್ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.