ಕಣಿವೆ, ನ. ೧೦: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಇದೀಗ ಗರ್ಭ ಧರಿಸುತ್ತಿರುವ (ಫಸಲುಗಟ್ಟುತ್ತಿರುವ) ಭತ್ತದ ಬೆಳೆಯ ಮೇಲೂ ಮಾರಕ ಪರಿಣಾಮ ಉಂಟುಮಾಡುತ್ತಿದೆ.
ಭತ್ತದ ಗಿಡಗಳಲ್ಲಿ ಹೂವುಗಳು ಅರಳಿದಾಗ ಆ ಹೂವುಗಳ ಒಳಗೆ ಮಳೆಯ ಹನಿಗಳು ಸೇರಿ ಫಸಲು ಗಟ್ಟುವುದರ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ ಎಂದು ಕೂಡ್ಲೂರು ಗ್ರಾಮದ ಕೃಷಿಕ ರಾಜೀವ್ ಹೇಳುತ್ತಾರೆ.
ಈ ವರ್ಷ ರೈತರಿಗೆ ಅನುಕೂಲವಾಗುವ ಹಾಗೆ ಮಳೆಯೇ ಬರಲಿಲ್ಲ. ಏನೋ ಯಾಂತ್ರಿಕ ಕೊಳವೆ ಬಾವಿ ಹೊಂದಿರುವ ಕೆಲವು ರೈತರು ಕಷ್ಟ ಪಟ್ಟು ಬೆಳೆದಿರುವ ಭತ್ತದ ಫಸಲಿನ ಮೇಲೆ ಕರುಣೆ ಇದ್ದಂತಿಲ್ಲ. ರೈತರ ಸ್ಥಿತಿ ಹೀಗಾದರೇ ಏನು ಮಾಡೋದು ಹೇಳಿ ಎನ್ನುತ್ತಾರೆ ರಾಜೀವ್. ಈ ಅಕಾಲಿಕ ಮಳೆ ಭತ್ತವಷ್ಟೇ ಅಲ್ಲ, ಮುಸುಕಿನ ಜೋಳದ ಫಸಲಿನ ಮೇಲೂ ದುಷ್ಪರಿಣಾಮ ಬೀರುತ್ತಿದೆ.
ಮಳೆಯಾಗಬೇಕಾದ ದಿನಗಳಲ್ಲಿ ಮಳೆ ಹೋಗಿ ಬೆಳೆ ಒಣಗಿ ಹಾಳಾಯಿತು. ಇದೀಗ ಕಷ್ಟಪಟ್ಟು ಬೆಳೆದ ಒಂದಷ್ಟು ಕೃಷಿ ಫಸಲಿಗೆ ಮಳೆ ಅಕಾಲಿಕವಾಗಿ ಸುರಿದು ಹಾಳು ಮಾಡುತ್ತಿದೆ ಎಂದು ವರುಣದೇವರ ಅವಕೃಪೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.