ಕಣಿವೆ, ನ. ೭ : ಕುಶಾಲನಗರ ಪಟ್ಟಣ ಹೊಸ ತಾಲೂಕಾಗಿ ರಚನೆಯಾದ ಬಳಿಕ ತಾಲೂಕು ಕೇಂದ್ರದಲ್ಲಿ ಇರಬೇಕಾದ ೧೦೦ ಹಾಸಿಗೆಗಳ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳ ಹಿಂದೆ ಮಂಜೂರಾತಿಯೊAದಿಗೆ ಬಿಡುಗಡೆಗೊಳಿಸಿರುವ ರೂ. ೩೦ ಕೋಟಿ ಆರೋಗ್ಯ ಇಲಾಖೆಯ ಬ್ಯಾಂಕಿನ ಖಾತೆಯಲ್ಲಿದೆ. ಆದರೆ ಆಸ್ಪತ್ರೆ ನಿರ್ಮಾಣಕ್ಕೆ ಬೇಕಾದ ವಿಶಾಲವಾದ ಜಾಗಕ್ಕಾಗಿ ಇಡೀ ಕುಶಾಲನಗರ ಪಟ್ಟಣದ ಆಸುಪಾಸಿನಲ್ಲಿ ಕಳೆದ ಎರಡು ವರ್ಷಗಳಿಂದ ಹುಡುಕಾಡಿದರೂ ಕೂಡ ಸೂಕ್ತ ಜಾಗ ಸಿಗದ ಕಾರಣ ಕುಶಾಲನಗರದ ಆಸ್ಪತ್ರೆಯ ಅಧೀನದಲ್ಲಿರುವ ಸೀಮಿತ ಜಾಗದಲ್ಲಿಯೇ ಆಸ್ಪತ್ರೆ ನಿರ್ಮಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಏಕೆಂದರೆ ಆಸ್ಪತ್ರೆ ಕಟ್ಟಲು ಕನಿಷ್ಟ ಎಂದರೂ ೪ ಎಕರೆ ಭೂಮಿ ಕೊಡಿ ಎಂದು ಕಂದಾಯ ಇಲಾಖೆ ಹಾಗೂ ನೀರಾವರಿ ಇಲಾಖೆಗಳಿಗೆ ಆರೋಗ್ಯ ಇಲಾಖೆ ಪತ್ರ ವ್ಯವಹಾರ ಮಾಡಿ ವರ್ಷಗಟ್ಟಲೆ ಕಾದರೂ ಕೂಡ ಆ ಎರಡು ಇಲಾಖೆಗಳಿಂದ ಪೂರಕವಾದ ಸ್ಪಂದನ ದೊರಕದ ಕಾರಣ ಬೇಸತ್ತ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಅಗತ್ಯವಿರುವ ತುರ್ತು ಆರೋಗ್ಯ ಸೇವೆ ಒದಗಿಸಲು ಆಸ್ಪತ್ರೆಯ ಅಧೀನದಲ್ಲಿ ಇರುವ ಜಾಗವನ್ನೇ ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸುತ್ತಿದೆ ಎನ್ನಲಾಗುತ್ತಿದೆ.

ರೋಗಿಗಳ ಹೆಚ್ಚಳ

ಕುಶಾಲನಗರದಲ್ಲಿ ಈಗ ಇರುವ ೫೦ ಹಾಸಿಗೆಗಳ ಸೌಲಭ್ಯದ ಆಸ್ಪತ್ರೆಗೆ ದಿನನಿತ್ಯವೂ ನೂರಾರು ರೋಗಿಗಳು ಧಾವಿಸುತ್ತಿದ್ದಾರೆ. ಆಸ್ಪತ್ರೆಯ ಅಂಕಿ ಅಂಶಗಳ ಪ್ರಕಾರ ಪ್ರತಿ ನಿತ್ಯವೂ ೨೫೦ ರಿಂದ ೩೦೦ ರೋಗಿಗಳು ಹೊರರೋಗಿಗಳಾಗಿ ಧಾವಿಸಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಒಳರೋಗಿಗಳಾಗಿ ೫೦ ಕ್ಕಿಂತ ಹೆಚ್ಚಿನ ರೋಗಿಗಳು ದಾಖಲಾಗುತ್ತಿದ್ದಾರೆ. ಕೆಲವು ದಿನಗಳು ಹಾಸಿಗೆಗಳೇ ದೊರಕದಷ್ಟು ರೋಗಿಗಳು ಆಗಮಿಸುತ್ತಾರೆ. ರಾಷ್ಟಿçÃಯ ಹೆದ್ದಾರಿ ೨೭೫ ಹಾಗೂ ರಾಜ್ಯ ಹೆದ್ದಾರಿಗಳು ಹಾಯ್ದು ಹೋಗಿರುವ ಕುಶಾಲನಗರ ಪಟ್ಟಣದ ಆಸುಪಾಸಿನಲ್ಲಿ ನಿತ್ಯವೂ ವಾಹನಗಳ ಅಪಘಾತ, ಇನ್ನಿತರೆ ಅವಘಡಗಳು ಸೇರಿದಂತೆ ಮತ್ತಷ್ಟು ಹೆಚ್ಚಿನ ರೋಗಿಗಳು ಆಗಮಿಸಿ ತುರ್ತು ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ದೂರದ ನಗರಗಳ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ.

ನೆರೆ ಜಿಲ್ಲೆಯ ಮಂದಿಯೇ ಹೆಚ್ಚು

ಹಾಸನ ಹಾಗೂ ಮೈಸೂರು ಜಿಲ್ಲೆಗಳ ಗಡಿಯಂಚಿನಲ್ಲಿ ಇರುವ ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ನಿತ್ಯವೂ ಆಗಮಿಸುವ ರೋಗಿಗಳ ಪೈಕಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಾವೇರಿ ನದಿ ದಂಡೆಯ ಆಸುಪಾಸಿನ ಹತ್ತಾರು ಗ್ರಾಮಗಳ ನೂರಾರು ರೋಗಿಗಳು ಬರುತ್ತಾರೆ. ಇನ್ನು ಹಾಸನ ಜಿಲ್ಲೆಯ ಗಡಿ ಗ್ರಾಮಗಳ ರೋಗಿಗಳು ಇಲ್ಲಿಗೆ ಆಗಮಿಸುತ್ತಿದ್ದಾರೆ. ಆಸ್ಪತ್ರೆಯ ವಸತಿ ಗೃಹಗಳ ಜಾಗದಲ್ಲಿ ನೂತನ ಆಸ್ಪತ್ರೆ ?

೧೦೦ ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಬೇಕಾದ ವಿಶಾಲ ವ್ಯಾಪ್ತಿಯ ಭೂಮಿ ಸಿಗದ ಕಾರಣ ಆಸ್ಪತ್ರೆಯ ವಸತಿ ಗೃಹಗಳು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಇರುವ ಸರ್ವೆ ನಂಬರ್ ೬೮ ರಲ್ಲಿನ ೪.೯೧ ಎಕರೆ ಜಾಗದಲ್ಲಿ ನೂತನ ಆಸ್ಪತ್ರೆ ನಿರ್ಮಿಸಲು ನೀಲಿ ನಕ್ಷೆ ಸಿದ್ದಪಡಿಸಲಾಗುತ್ತಿದೆ.

ಲಯನ್ಸ್ ಜಾಗ ಹಿಂಪಡೆಯಲು ಹೋರಾಟ

ಸರ್ಕಾರಿ ಆಸ್ಪತ್ರೆಗೆ ಸೇರಿದ ಸರ್ವೆ ನಂಬರ್ ೬೮ ರಲ್ಲಿನ ಒಂದು ಎಕರೆ ಭೂಮಿಯನ್ನು ೧೯೯೩ ರಲ್ಲಿ ಲಯನ್ಸ್ ಸಂಸ್ಥೆಯ ಕೋರಿಕೆಯ ಮೇರೆಗೆ ಕಣ್ಣಿನ ಆಸ್ಪತ್ರೆ ನಿರ್ಮಿಸುವ ಉದ್ದೇಶಕ್ಕೆ ಅಂದು ಅಸ್ತಿತ್ವದಲ್ಲಿದ್ದ ಕೊಡಗು ಜಿಲ್ಲಾ ಪರಿಷತ್ತು ಲಯನ್ಸ್ಗೆ ನೀಡಿತ್ತು.

ಮೂರು ವರ್ಷಗಳ ಒಳಗೆ ಕಣ್ಣಾಸ್ಪತ್ರೆ ನಿರ್ಮಿಸುವಂತೆ ಷರತ್ತು ವಿಧಿಸಿ ಆರೋಗ್ಯ ಇಲಾಖೆ ಲಯನ್ಸ್ಗೆ ಭೂಮಿಯನ್ನು ನೀಡಿತ್ತು. ಭೂಮಿ ಪಡೆದು ೧೫ ವರ್ಷಗಳು ಕಳೆದರೂ ಕೂಡ ಕಣ್ಣಾಸ್ಪತ್ರೆ ನಿರ್ಮಿಸದ ಕಾರಣ ಮತ್ತು ಆಸ್ಪತ್ರೆಯ ಮೇಲ್ದರ್ಜೆಗೆ ಸೂಕ್ತ ಜಾಗವೂ ಇಲ್ಲದ ಕಾರಣ ಜಾಗ ಮರಳಿಸುವಂತೆ ಆರೋಗ್ಯ ಇಲಾಖೆ ಲಯನ್ಸ್ಗೆ ಕೋರಿಕೆ ಸಲ್ಲಿಸಿದ್ದು, ಇದೀಗ ಈ ವಿವಾದ ನ್ಯಾಯಾಲಯದ ಅಂಗಳದಲ್ಲಿದೆ.

ಪಿಲ್ಲರ್‌ಗಳನ್ನು ನಿರ್ಮಿಸಿ ಆಸ್ಪತ್ರೆ ನಿರ್ಮಿಸುವ ಗುರಿ

ಆಸ್ಪತ್ರೆಗೆ ಬೇಕಿರುವಷ್ಟು ಜಾಗ ಲಭ್ಯ ವಿಲ್ಲದ ಕಾರಣ ಇರುವ ಜಾಗದಲ್ಲಿಯೇ ಆಸ್ಪತ್ರೆ ನಿರ್ಮಿಸಲು ಚಿಂತನೆ ನಡೆಸಿರುವ ಆರೋಗ್ಯ ಇಲಾಖೆ ಕೆಳ ಹಂತದಲ್ಲಿ ಪಿಲ್ಲರ್‌ಗಳನ್ನು ತೆರೆದು ಅದರಲ್ಲಿ ವಾಹನಗಳ ನಿಲುಗಡೆಯ ಜೊತೆಗೆ ಮಳೆಗಾಲದಲ್ಲಿ ಕಾವೇರಿ ನದಿಯಲ್ಲಿ ಉಂಟಾಗುವ ಪ್ರವಾಹವನ್ನು ಎದುರಿಸಲು ಅನುಕೂಲವಾಗುವ ಮಾದರಿಯಲ್ಲಿ ನೀಲಿನಕ್ಷೆ ಸಿದ್ಧಪಡಿಸಲು ಯೋಜಿಸಲಾಗುತ್ತಿದೆ. ಸರ್ವೆ ನಂಬರ್ ೬೮ ರಲ್ಲಿ ಲಭ್ಯವಿದ್ದ ೪.೯೧ ಎಕರೆ ಭೂಮಿ ಪೈಕಿ ಈಗಾಗಲೇ ೧.೦೬ ಎಕರೆ ಭೂಮಿಯನ್ನು ಲಯನ್ಸ್ ಸಂಸ್ಥೆಗೆ ನೀಡಲಾಗಿದೆ. (ಮೊದಲ ಪುಟದಿಂದ) ೦.೫೨ ಎಕರೆ ಭೂಮಿ ಜಾಗದಲ್ಲಿ ಆಸ್ಪತ್ರೆಯ ತಾಲೂಕು ಕಛೇರಿ, ವಸತಿ ಗೃಹಗಳಿವೆ. ಇನ್ನು ಆಸ್ಪತ್ರೆಯ ಅಧೀನದಲ್ಲಿನ ಕಾವೇರಿ ನದಿ ದಂಡೆಯಲ್ಲಿನ ೧.೨೨ ಎಕರೆ ಭೂಮಿ ಕಾವೇರಿ ನದಿಯ ಪ್ರವಾಹದಲ್ಲಿ ಮುಳುಗಡೆಯಾಗಲಿದೆ. ಹಾಗಾಗಿ ವಸತಿ ಗೃಹಗಳು ಹಾಗೂ ಕಛೇರಿ ಕಟ್ಟಡಗಳನ್ನು ತೆರವುಗೊಳಿಸಿ, ಲಯನ್ಸ್ ಸಂಸ್ಥೆಗೆ ನೀಡಿರುವ ಜಾಗವನ್ನು ಅವರಿಂದ ಮರಳಿ ಪಡೆದು ಲಭ್ಯವಾಗುವ ಜಾಗದಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಬೇಕಿದೆ. ಇಲ್ಲಿ ಆಸ್ಪತ್ರೆ ಕಟ್ಟಡದ ಸುತ್ತಲೂ ಅಗ್ನಿ ಶಾಮಕ ವಾಹನಗಳು ಸುಲಲಿತವಾಗಿ ಸಂಚರಿಸುವಷ್ಟು ೨೦ ಅಡಿ ಸುತ್ತಳತೆಯ ಜಾಗವನ್ನು ಬಿಟ್ಟು ಕಟ್ಟಡವನ್ನು ನಿರ್ಮಿಸಬೇಕಿದೆ.

ಪಿಲ್ಲರ್ ನಿರ್ಮಿಸಿ ತಳ ಅಂತಸ್ತಿನಲ್ಲಿ ವಾಹನಗಳ ನಿಲುಗಡೆ, ಮೊದಲ ಅಂತಸ್ತಿನಲ್ಲಿ ಆಸ್ಪತ್ರೆ ಕಟ್ಟಡ, ಎರಡನೇ ಅಂತಸ್ತಿನಲ್ಲಿ ಆರೋಗ್ಯಾಧಿಕಾರಿಗಳ ಕಛೇರಿ, ಪ್ರಯೋಗಾಲಯಗಳನ್ನು ನಿರ್ಮಿಸಬೇಕಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ತಾಲೂಕು ಅಧಿಕಾರಿ ಶ್ರೀನಿವಾಸ್ ‘ಶಕ್ತಿ’ ಗೆ ತಿಳಿಸಿದ್ದಾರೆ.

ಆಸ್ಪತ್ರೆಗೆ ಅಂಡರ್ ಪಾಸ್ ನಿರ್ಮಾಣದ ಗುರಿ

ನೂತನ ಆಸ್ಪತ್ರೆಯನ್ನು ಲಯನ್ಸ್ ಜಾಗದಲ್ಲಿ ನಿರ್ಮಿಸಿದ್ದೇ ಆದಲ್ಲಿ ಈಗ ಇರುವ ಆಸ್ಪತ್ರೆಗೆ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಅಂಡರ್ ಪಾಸ್ ನಿರ್ಮಿಸಿ ರೋಗಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಅನುಕೂಲ ಒದಗಿಸಬಹುದಾಗಿದೆ.

ಒಟ್ಟಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಈ ಮಹತ್ವಾಕಾಂಕ್ಷೆಯ ಯೋಜನೆಯ ಕನಸು ನನಸು ಮಾಡಲು ಸಮಯಾವಕಾಶವೂ ಬೇಕು. ಹಾಗೆಯೇ ಸರ್ಕಾರದಿಂದ ಸೂಕ್ತ ಅನುದಾನವೂ ಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಜಂಟಿಯಾಗಿ ಸರ್ಕಾರದ ಮೇಲೆ ಒತ್ತಡ ತಂದು ಆದಷ್ಟು ಬೇಗ ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಮೇಲ್ದರ್ಜೆಯ ಕನಸನ್ನು ನನಸು ಮಾಡಬೇಕಿದೆ ಅಷ್ಟೆ.

ವಿಶೇಷ ವರದಿ : ಕೆ.ಎಸ್.ಮೂರ್ತಿ